ADVERTISEMENT

ಇಂದಿನಿಂದ ಮೀನುಗಾರಿಕೆ ನಿಷೇಧ

​ಪ್ರಜಾವಾಣಿ ವಾರ್ತೆ
Published 14 ಜೂನ್ 2012, 19:30 IST
Last Updated 14 ಜೂನ್ 2012, 19:30 IST
ಇಂದಿನಿಂದ ಮೀನುಗಾರಿಕೆ ನಿಷೇಧ
ಇಂದಿನಿಂದ ಮೀನುಗಾರಿಕೆ ನಿಷೇಧ   

ಮಂಗಳೂರು: ಮುಂಗಾರು ಆರಂಭದೊಂದಿಗೆ ಮೀನುಗಳು ಸಂತಾನೋತ್ಪತ್ತಿ ಪ್ರಕ್ರಿಯೆಯನ್ನು ತೀವ್ರಗೊಳಿಸುವ ಸಂದರ್ಭದಲ್ಲಿ ಮೊಟ್ಟೆ, ಮರಿಗಳು ನಾಶವಾಗಬಾರದು ಎಂಬ ಕಾರಣಕ್ಕಾಗಿ ರಾಜ್ಯದ ಕರಾವಳಿ ಭಾಗದಲ್ಲಿ ಶುಕ್ರವಾರದಿಂದ ಯಾಂತ್ರೀಕೃತ ಮೀನುಗಾರಿಕೆಗೆ ನಿಷೇಧ ಜಾರಿಗೆ ಬರಲಿದೆ.

ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಆಗಸ್ಟ್ 10ರವರೆಗೆ ಈ ನಿಷೇಧ ಜಾರಿಯಲ್ಲಿರುತ್ತದೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ಜುಲೈ 31ಕ್ಕೆ ನಿಷೇಧ ಕೊನೆಗೊಳ್ಳಲಿದೆ. ನೆರೆಯ ಕೇರಳದಲ್ಲಿ ಸಹ ಶುಕ್ರವಾರದಿಂದ ಯಾಂತ್ರೀಕೃತ ಮೀನುಗಾರಿಕೆಗೆ ನಿಷೇಧ ಹೇರಲಾಗಿದೆ.

ಈ ನಿಷೇಧದ ಅವಧಿಯಲ್ಲಿ ಸಾಂಪ್ರದಾಯಿಕ ನಾಡದೋಣಿಗಳಲ್ಲಿ ಮೀನುಗಾರಿಕೆ ನಡೆಸುವುದಕ್ಕೆ ಅಡ್ಡಿ ಇಲ್ಲ. ಮಳೆಗಾಲದಲ್ಲಿ ಸಮುದ್ರದಲ್ಲಿ ಭಾರಿ ಗಾತ್ರದ ಅಲೆಗಳು ಏಳುವುದರಿಂದ ಸಮುದ್ರಕ್ಕೆ ಇಳಿಯುವುದು ಅಪಾಯಕಾರಿ. ನಿಷೇಧ ಉಲ್ಲಂಘಿಸಿ ಕಡಲಿಗೆ ಇಳಿಯುವ ಯಾಂತ್ರೀಕೃತ ದೋಣಿಗಳಿಗೆ ಸಬ್ಸಿಡಿ ದರದ ಡೀಸೆಲ್ ಪೂರೈಕೆ ಸ್ಥಗಿತ ಸಹಿತ ಇತರ ಸೌಲಭ್ಯಗಳನ್ನು ಕಡಿತಗೊಳಿಸಲಾಗುವುದು ಎಂದು ಎಚ್ಚರಿಸಲಾಗಿದೆ.

ಮೀನುಗಾರಿಕಾ ನಿಷೇಧ ಹಾಗೂ ಸಮುದ್ರದ ಅಬ್ಬರ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಹೆಚ್ಚಿನ ಎಲ್ಲಾ ದೋಣಿಗಳು ಈಗಾಗಲೇ ಮಂಗಳೂರಿನ ಹಳೆ ಬಂದರು, ಮಲ್ಪೆ ಸಹಿತ ಇತರ ಮೀನುಗಾರಿಕಾ ಬಂದರುಗಳಿಗೆ ಮರಳಿವೆ. ಆದರೆ ಎಲ್ಲೆಡೆ ದೋಣಿ ನಿಲುಗಡೆಗೆ ಸ್ಥಳದ ಅಭಾವ ಕಂಡುಬಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.