ನಂಜನಗೂಡು: ಭ್ರಷ್ಟಾಚಾರ, ಸ್ವಜನ ಪಕ್ಷಪಾತ, ಭೂ ಹಗರಣಗಳ ಆರೋಗಳಲ್ಲಿ ಸಿಲುಕಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಈಗ ಮತ್ತೆ ಭುಗಿಲೆದ್ದಿರುವ ಭಿನ್ನಮತದಿಂದ ಪಾರಾಗಲೋ ಎಂಬಂತೆ ಮತ್ತೊಮ್ಮೆ ಇಲ್ಲಿನ ನಂಜುಂಡೇಶ್ವರನ ಸನ್ನಿಧಿಗೆ ಬುಧವಾರ (ಮಾರ್ಚ್ 23) ಭೇಟಿ ನೀಡಲಿದ್ದಾರೆ. ಯಡಿಯೂರಪ್ಪ ಅವರಿಂದ ರುದ್ರಪಾರಾಯಣ ಪೂಜೆ, 101 ಅರ್ಚಕ ವೃಂದ ಮಂತ್ರ ಪಠಿಸಲು ಸಕಲ ಸಿದ್ಧತೆ ನಡೆದಿದೆ.
ಶ್ರೀಕಂಠೇಶ್ವರಸ್ವಾಮಿ ದೇವಾಲಯದ ಒಳಾವರಣವನ್ನು ವಿಶೇಷವಾಗಿ ಶುಚಿಗೊಳಿಸಲಾಗಿದೆ. ಚನ್ನಬಸವಮಂಟಪ ರುದ್ರಪಾರಾಯಣಕ್ಕೆ ಅಣಿಯಾಗುತ್ತಿದೆ. ಇದಕ್ಕಾಗಿ ಶ್ರೀಕಂಠೇಶ್ವರಸ್ವಾಮಿ ಹಾಗೂ ಇತರೆ ದೇವಾಲಯಗಳ 51 ಅರ್ಚಕರನ್ನು ಮತ್ತು ಮೈಸೂರು ಮಹಾರಾಜ ಸಂಸ್ಕೃತ ಪಾಠಶಾಲೆಯ 50 ವಿದ್ಯಾರ್ಥಿಗಳನ್ನು ಬರಮಾಡಿಕೊಳ್ಳಲಾಗಿದೆ. ಕೆಲವು ತಿಂಗಳ ಹಿಂದೆ ಡಿನೋಟಿಪೈ ಹಗರಣ ಸ್ಫೋಟಗೊಂಡ ಸಂದರ್ಭದಲ್ಲಿ ಯಡಿಯೂರಪ್ಪ ಇದೇ ದೇವಾಲಯಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದ್ದರು. ‘ನಂಜುಂಡೇಶ್ವರನ ಮೇಲೆ ಆಣೆ ಮಾಡಿ ಹೇಳುತ್ತೇನೆ, ಇನ್ನು ಮುಂದೆ ತಪ್ಪು ಮಾಡುವುದಿಲ್ಲ’ ಎಂದು ಘೋಷಣೆ ಮಾಡಿದ್ದನ್ನು ಸ್ಮರಿಸಬಹುದು.
ಕಾರ್ಯಕ್ರಮ: ಬೆಂಗಳೂರಿನ ಜಕ್ಕೂರು ವಿಮಾನ ನಿಲ್ದಾಣದಿಂದ ಸಿಎಂ, ಬುಧವಾರ ಬೆಳಿಗ್ಗೆ 9.30ಕ್ಕೆ ಹೆಲಿಕಾಪ್ಟರ್ ಮೂಲಕ ಹೊರಟು, ಮೈಸೂರು ಮಂಡಕಳ್ಳಿ ವಿಮಾನ ನಿಲ್ದಾಣಕ್ಕೆ ಬೆಳಿಗ್ಗೆ 10.20ಕ್ಕೆ ಬಂದು ಇಳಿಯುವರು. ಅಲ್ಲಿಂದ ರಸ್ತೆ ಮಾರ್ಗವಾಗಿ ಬೆಳಿಗ್ಗೆ 10.45ಕ್ಕೆ ಶ್ರೀಕಂಠೇಶ್ವರಸ್ವಾಮಿ ದೇವಸ್ಥಾನಕ್ಕೆ ಆಗಮಿಸುವರು.
ಪೂಜೆ ಮುಗಿಸಿ, ಮಧ್ಯಾಹ್ನ 12.10ಕ್ಕೆ ಹೊರಟು ಕೈಗಾರಿಕಾ ಪ್ರದೇಶಕ್ಕೆ ತೆರಳುವರು. ನೆಸ್ಲೆ ಇಂಡಿಯಾ ಲಿ. ಕಂಪೆನಿ ಹೊಸದಾಗಿ ನಿರ್ಮಿಸಿರುವ 2ನೇ ಘಟಕವಾದ ‘ಮ್ಯಾಗಿ ನೂಡಲ್ಸ್’ ಉತ್ಪಾದನೆಯ ಕಾರ್ಖಾನೆಯನ್ನು ಮಧ್ಯಾಹ್ನ 12.30ಕ್ಕೆ ಉದ್ಘಾಟಿಸುವರು. ಮಧ್ಯಾಹ್ನ 2ಕ್ಕೆ ನಿರ್ಗಮನ. 2.30ಕ್ಕೆ ಮಂಡಕಳ್ಳಿ ವಿಮಾನ ನಿಲ್ದಾಣದಿಂದ ಕೊಪ್ಳಳ ಜಿಲ್ಲೆ ಗಂಗಾವತಿಗೆ ಪ್ರಯಾಣ ಬೆಳೆಸುವರು ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.