ADVERTISEMENT

ಇಂದು ವಿಶ್ವಾಸ ಮತಯಾಚನೆ

​ಪ್ರಜಾವಾಣಿ ವಾರ್ತೆ
Published 3 ಮೇ 2011, 19:30 IST
Last Updated 3 ಮೇ 2011, 19:30 IST

ದೊಡ್ಡಬಳ್ಳಾಪುರ: ಅವಿಶ್ವಾಸ ನಿರ್ಣಯದಿಂದ ತೆರವಾಗಿದ್ದ ನಗರ ಸಭೆ ಅಧ್ಯಕ್ಷ ಸ್ಥಾನಕ್ಕೆ ಮೇ.4 ರಂದು ಮಧ್ಯಾಹ್ನ 12.30ಕ್ಕೆ ಚುನಾವಣೆ ನಡೆಯಲಿದೆ.  ಬಿಸಿಎಂ ‘ಬಿ’ ಅಭ್ಯರ್ಥಿಗೆ ಮೀಸಲಾಗಿರುವ ಅಧ್ಯಕ್ಷ ಸ್ಥಾನಕ್ಕೆ ಜೆಡಿಎಸ್‌ನಿಂದ ಜಗದೀಶ್‌ರೆಡ್ಡಿ ಹಾಗೂ ಕಾಂಗ್ರೆಸ್ ಪಕ್ಷದಿಂದ ಜಿ.ಎಸ್.ಸೋಮರುದ್ರಶರ್ಮ ಆಕಾಂಕ್ಷಿಗಳಾಗಿದ್ದಾರೆ.

ಪ್ರಸ್ತುತ 31 ಸ್ಥಾನಗಳನ್ನು ಹೊಂದಿರುವ ನಗರ ಸಭೆಯಲ್ಲಿ ಜೆಡಿಎಸ್ 11, ಕಾಂಗ್ರೆಸ್ 12, ಬಿಜೆಪಿ 4, ಕನ್ನಡ ಪಕ್ಷ 2, ಸಿಪಿಐ(ಎಂ) 1 ಹಾಗೂ ಸ್ವತಂತ್ರ ಅಭ್ಯರ್ಥಿ 1 ಸ್ಥಾನದಲ್ಲಿ ಜಯಗಳಿಸಿದ್ದಾರೆ. ಕನ್ನಡ ಪಕ್ಷ, ಸಿಪಿಐ(ಎಂ) ಪಕ್ಷದವರು ಅಧ್ಯಕ್ಷರ ಆಯ್ಕೆ ಕುರಿತು ಇನ್ನು ಯಾವುದೇ ನಿರ್ಧಾರ ಪ್ರಕಟಿಸಿಲ್ಲ.

ಈ ಮದ್ಯೆ ನಾಲ್ಕು ಜನ ಸದಸ್ಯರನ್ನು ಹೊಂದಿರುವ ಬಿಜೆಪಿಯಲ್ಲಿ ಅವಿಶ್ವಾಸ ನಿರ್ಣಯ ಸಂದರ್ಭದಲ್ಲಿ ಇಬ್ಬರು ತಟಸ್ಥವಾಗಿ ಉಳಿದರೆ, ಇಬ್ಬರು ಅವಿಶ್ವಾಸ ನಿರ್ಣಯದ ಪರವಾಗಿ ‘ಕೈ’ ಎತ್ತಿದ್ದರು.

ವಿಪ್ ಜಾರಿ : ಮೇ.4 ರಂದು ಅಧ್ಯಕ್ಷರ ಆಯ್ಕೆಗಾಗಿ ನಡೆಯುವ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ವತಿಯಿಂದ ವಿಪ್ ಜಾರಿಮಾಡಲು ಭಾನುವಾರ ನಡೆದ ನಗರ ಸಭಾ ಸದಸ್ಯರ ಹಾಗೂ ಮುಖಂಡರ ಸಭೆಯಲ್ಲಿ ನಿರ್ಧರಿಸಲಾಗಿದೆ. ಆದರೆ ಅಧ್ಯಕ್ಷ ಸ್ಥಾನದ ಅಧಿಕೃತ ಅಭ್ಯರ್ಥಿಯನ್ನು ಬುಧವಾರ ಬೆಳಿಗ್ಗೆ ತಿಳಿಸಲು ಗೋಪ್ಯವಾಗಿ ಇಡಲಾಗಿದೆ.

ಜೆಡಿಎಸ್‌ನಲ್ಲಿ ಈಗಾಗಲೇ ಜಗದೀಶ್‌ರೆಡ್ಡಿ ಅವರನ್ನೇ ಅಧ್ಯಕ್ಷರನ್ನಾಗಿ ಮಾಡಲು ಸಿದ್ದತೆಗಳು ನಡೆದಿವೆ. ಅವಿಶ್ವಾಸ ಮತಯಾಚನೆ ಸಂದರ್ಭದಲ್ಲಿ ಜೆಡಿಎಸ್ ಪಕ್ಷದ ಸದಸ್ಯ ವಡ್ಡರಹಳ್ಳಿರವಿ ಅವರು ತಟಸ್ಥವಾಗಿ ಉಳಿದಿದ್ದರು.

ಇದರಿಂದ ಅಧ್ಯಕ್ಷರ ಆಯ್ಕೆ ಸಂದರ್ಭದಲ್ಲೂ ತಟಸ್ಥವಾಗಿ ಉಳಿದರೆ ಏನು ? ಎನ್ನುವ ಭೀತಿಯಲ್ಲಿರುವ ಜೆಡಿಎಸ್, ತಮ್ಮ ಪಕ್ಷದ ಅಧಿಕೃತ ಅಭ್ಯರ್ಥಿ ಪರವಾಗಿಯೇ ಮತಹಾಕುವಂತೆ ‘ವಿಪ್’ ಜಾರಿಗಳಿಸಲು ಸಿದ್ದತೆಗಳು ನಡೆಸಲಾಗಿದೆ ಎಂದು ಜೆಡಿಎಸ್ ಮೂಲಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.