ADVERTISEMENT

ಇತಿಹಾಸಕಾರನಿಗೆ ಸಂಸ್ಕೃತಿ ಅರಿವು ಅಗತ್ಯ

​ಪ್ರಜಾವಾಣಿ ವಾರ್ತೆ
Published 10 ಮಾರ್ಚ್ 2011, 18:30 IST
Last Updated 10 ಮಾರ್ಚ್ 2011, 18:30 IST

ಶಿವಮೊಗ್ಗ: ಇತಿಹಾಸಕಾರನಿಗೆ ದೂರದೃಷ್ಟಿಯ ಜತೆಗೆ ಸಂಸ್ಕೃತಿಯ ಹಿರಿಮೆ ಅರಿಯುವ ವ್ಯವಧಾನ ಮತ್ತು ಕೌಶಲ್ಯ ಇರಬೇಕೆಂದು ಪ್ರಾಕ್ತನ ಶಾಸ್ತ್ರಜ್ಞ ಪ್ರೊ. ಅ.ಸುಂದರ ತಿಳಿಸಿದರು. ನಗರದ ಕಮಲಾ ನೆಹರು ರಾಷ್ಟ್ರೀಯ ಮಹಿಳಾ ಕಾಲೇಜಿನ ಇತಿಹಾಸ ವೇದಿಕೆ ಗುರುವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ‘ಕರ್ನಾಟಕ ಇತಿಹಾಸದ ಇತ್ತೀಚಿನ ಸಂಶೋಧನೆಗಳು’ ಕುರಿತು ಅವರು ಉಪನ್ಯಾಸ ನೀಡಿದರು.

ಯಾವುದೇ ಭಾಗದ ಸಂಸ್ಕೃತಿಯನ್ನು ಅರಿಯುವ ವ್ಯವಧಾನ ಇಲ್ಲದೆ, ಇತಿಹಾಸದ ಆರಂಭ-ಅಂತ್ಯದ ಕುರಿತು ವಸ್ತುನಿಷ್ಠವಾಗಿ ಹೇಳುವುದುಅಸಾಧ್ಯ. ಇತ್ತೀಚಿನ ದಿನಗಳವರೆಗೂ ವಸ್ತುನಿಷ್ಠ ಇತಿಹಾಸ ಬರೆಯುವ ಪದ್ಧತಿಯೇ ಇರಲಿಲ್ಲ. ಕೆಲ ವರ್ಷಗಳಿಂದ ಆ ಪದ್ಧತಿ ಆರಂಭವಾಗಿದೆ ಎಂದು ಹೇಳಿದರು.

ಆಯಾ ನಾಡಿನ, ಸಮುದಾಯದ ಸಂಸ್ಕೃತಿ, ಆಚಾರ-ವಿಚಾರ, ಬೆಳೆದುಬಂದ ದಾರಿಯ ಬಗ್ಗೆ ಇತಿಹಾಸಕಾರ ಸಮಗ್ರ ಅಧ್ಯಯನ ಮಾಡಬೇಕಾಗುತ್ತದೆ ಎಂದು ತಿಳಿಸಿದರು.ನಾವು ಓದುತ್ತಿರುವ ಇತಿಹಾಸ ಪೂರ್ಣವಲ್ಲ. ಕರ್ನಾಟಕದಲ್ಲಿ 10.50 ಲಕ್ಷ ವರ್ಷಗಳ ಹಿಂದೆ ಮಾನವ ಸಂತತಿ ಇತ್ತೆಂಬ ಸಾಕಷ್ಟು ಪುರಾವೆಗಳು ದೊರೆತಿವೆ. ಕೃಷ್ಣಾ, ಭೀಮಾ, ಮಲಪ್ರಭಾ, ತುಂಗಭದ್ರಾ, ಕಾವೇರಿ ನದಿ ತೀರಗಳ ಪ್ರದೇಶದಲ್ಲಿ ದೊರೆತಿರುವ ಪ್ರಾಗೈತಿಹಾಸದ ಅವಶೇಷಗಳು ಹಾಗೂ ಪುರಾವೆಗಳು ಇದಕ್ಕೆ ಪುಷ್ಟಿ ನೀಡುತ್ತವೆ ಎಂದು ಹೇಳಿದರು. 

ಸರ್ಕಾರದ ‘ಕರ್ನಾಟಕ ಪುರಾತತ್ವ ರತ್ನ’ ಪ್ರಶಸ್ತಿ ಪುರಸ್ಕೃತರಾದ ಪ್ರೊ. ಸುಂದರ ಅವರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು.ರಾಷ್ಟ್ರೀಯ ಶಿಕ್ಷಣ ಸಮಿತಿ ಕಾರ್ಯದರ್ಶಿ ಎಸ್.ವಿ. ತಿಮ್ಮಯ್ಯ, ಪ್ರೊ.ಎಚ್.ಎಸ್. ಗಣೇಶ್‌ಮೂರ್ತಿ, ಪ್ರಾಧ್ಯಾಪಕ ಡಾ.ಬಾಲಕೃಷ್ಣ ಹೆಗಡೆ ಮತ್ತಿತರರು ಉಪಸ್ಥಿತರಿದ್ದರು. ಪ್ರಾಂಶುಪಾಲರಾದ ಪ್ರೊ.ಆರ್.ಕೃಷ್ಣವೇಣಿ ಅಧ್ಯಕ್ಷತೆ ವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.