ADVERTISEMENT

ಇಬ್ಬರು ಅರಣ್ಯಾಧಿಕಾರಿ ಅಮಾನತು

​ಪ್ರಜಾವಾಣಿ ವಾರ್ತೆ
Published 24 ಫೆಬ್ರುವರಿ 2012, 19:30 IST
Last Updated 24 ಫೆಬ್ರುವರಿ 2012, 19:30 IST

ಕನಕಪುರ:  ತಾಲ್ಲೂಕಿನಾದ್ಯಂತ ನಡೆಯುತ್ತಿರುವ ಅಕ್ರಮ ಗಣಿಗಾರಿಕೆಗೆ ಅರಣ್ಯ ಇಲಾಖೆ ಅಧಿಕಾರಿಗಳು ಸಹಕರಿಸಿದ್ದಾರೆಂಬ ಹಿನ್ನೆಲೆಯಲ್ಲಿ ಇಬ್ಬರು  ಅರಣ್ಯಾಧಿಕಾರಿಗಳನ್ನು ಅಮಾನತು ಮಾಡಲಾಗಿದೆ.

ಉಪ ಸಂರಕ್ಷಣಾಧಿಕಾರಿ ಕೆ.ಡಿ. ಶ್ರಿನಿವಾಸಯ್ಯ, ವಲಯ ಅರಣ್ಯಾಧಿಕಾರಿ ನಾಗರಾಜು ಅಮಾನತ್ತುಗೊಂಡಿರುವ ಅಧಿಕಾರಿಗಳಾಗಿದ್ದಾರೆ.

ತಾಲ್ಲೂಕಿನ ಕೋಡಿಹಳ್ಳಿ ಹೋಬಳಿಯ ಬಿಳಿದಾಳೆ ಸರ್ವೆ ನಂ. 35, ಹೆರ‌್ಯಾಂದಪನ ಹಳ್ಳಿ ಸರ್ವೆ ನಂ. 20 ಹಾಗೂ ಸಾಲಬನ್ನಿ ಸರ್ವೆ ನಂ.18 ರಲ್ಲಿ ಅಕ್ರಮ ಗಣಿಗಾರಿಕೆ ನಡೆಸಲು ಅರಣ್ಯ ಪ್ರದೇಶದಲ್ಲಿ ಅಕ್ರಮ ರಸ್ತೆ ನಿರ್ಮಾಣ ಕಾಮಗಾರಿಗೆ ಇವರು ಬೆಂಬಲಿಸಿದ್ದಾರೆ. ಅಕ್ರಮ ಗಣಿಗಾರಿಕೆಯಲ್ಲಿ ಭಾರಿ ಪ್ರಮಾಣದ ಸ್ಫೋಟಕಗಳನ್ನು ಬಳಸುವುದರಿಂದ ಆನೆ ಸೇರಿದಂತೆ ಇತರೆ ಕಾಡುಪ್ರಾಣಿಗಳು ಹಳ್ಳಿಗಳಿಗೆ ನುಗ್ಗಿ ರೈತರ ಅಪಾರ ಬೆಳೆಹಾನಿ ಮಾಡುತ್ತಿವೆ. ಅದನ್ನು ತಡೆಯುವಲ್ಲಿ ಈ ಅಧಿಕಾರಿಗಳು ಸಂಪೂರ್ಣ ವಿಫಲವಾಗಿದ್ದಾರೆ.

ಈ ಆರೋಪಗಳು ಸಾಬೀತಾಗಿರುವ ಹಿನ್ನೆಲೆಯಲ್ಲಿ ಇವರಿಬ್ಬರನ್ನು  ಅಮಾನತು ಪಡಿಸಿರುವುದಾಗಿ ತಿಳಿದು ಬಂದಿದೆ. ಅರಣ್ಯ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರೂ ಆದ ಸಿ.ಪಿ.ಯೋಗೇಶ್ವರ್ ಅವರು ಇತ್ತೀಚೆಗೆ ತಾಲ್ಲೂಕಿಗೆ ಭೇಟಿ ನೀಡಿದ್ದಾಗ ಅರಣ್ಯ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಅಕ್ರಮ ಗಣಿಗಾರಿಕೆ ಪ್ರದೇಶಗಳಿಗೆ ಖುದ್ದು ಭೇಟಿ ನೀಡಿ ಮಾಹಿತಿ ಪಡೆದಿದ್ದರು.

ಈ ವೇಳೆ ಪಡೆದ ಮಾಹಿತಿ ಆಧರಿಸಿ ಸಚಿವರು ಈ ಅಧಿಕಾರಿಗಳನ್ನು ಅಮಾನತು ಮಾಡಲು ಆದೇಶಿಸಿದ್ದರು ಎಂದು ತಿಳಿದು ಬಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.