ADVERTISEMENT

ಉಚಿತ ಸೈಕಲ್‌ ಭಾಗ್ಯವಿಲ್ಲದ ವಿದ್ಯಾರ್ಥಿನಿಯರು!

​ಪ್ರಜಾವಾಣಿ ವಾರ್ತೆ
Published 23 ಡಿಸೆಂಬರ್ 2013, 5:21 IST
Last Updated 23 ಡಿಸೆಂಬರ್ 2013, 5:21 IST
ಸಾಲಾಗಿ ನಿಂತಿರುವ ಸೈಕಲ್‌ಗಳು.
ಸಾಲಾಗಿ ನಿಂತಿರುವ ಸೈಕಲ್‌ಗಳು.   

ತ್ಯಾವಣಿಗೆ: ಇಲ್ಲಿನ 9ನೇ ತರಗತಿಯಲ್ಲಿ ವಿದ್ಯಾರ್ಥಿನಿಯರಿಗೆ ಇದುವರಿಗೂ ಉಚಿತ ಸೈಕಲ್‌ಗಳ ಭಾಗ್ಯ ದೊರೆತಿಲ್ಲ!

ವಿದ್ಯಾರ್ಥಿನಿಯರಿಗೆ ಯಾವಾಗ ಸೈಕಲ್‌ ವಿತರಿಸುತ್ತೀರಾ ಎಂದು ಪೋಷಕರು ಶಾಲಾ ಶಿಕ್ಷಕರನ್ನು ನಿತ್ಯ ಕೇಳುವುದೇ ಆಗಿದೆ.

ಇದುವರೆಗೂ ನಮ್ಮ ಮಕ್ಕಳಿಗೆ ಉಚಿತ ಸೈಕಲ್‌ ಭಾಗ್ಯ ದೊರೆತಿಲ್ಲ ಎಂದು ಪೋಷಕರು ಅಳಲು ತೊಡಿಕೊಂಡಿದ್ದಾರೆ.

2013–14ನೇ ಸಾಲಿನ ಸೈಕಲ್‌ಗಳನ್ನು ಇಲಾಖೆಯಿಂದ ಸರಬರಾಜು ಮಾಡಿ ಶಾಲೆಗಳಲ್ಲಿ ವಿತರಿಸಲಾಗಿದ್ದು. ಆದರೆ, 2012–13ನೇ ಸಾಲಿನಲ್ಲಿ ಕೆಲವು ಶಾಲೆಗಳಿಗೆ ಬಾಲಕರಿಗೆ ಮಾತ್ರ ಸೈಕಲ್‌ ವಿತರಿಸಲಾಗಿದೆ. ಆದರೆ,  ಬಾಲಕಿಯರಿಗೆ ಇದುವರೆಗೂ ಇಲಾಖೆಯಿಂದ ಸೈಕಲ್‌ಗಳನ್ನು ವಿತರಿಸಿಲ್ಲ.

ಕಳೆದ ಸಾಲಿನಲ್ಲಿ ತ್ಯಾವಣಿಗೆ ಗ್ರಾಮದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದಲ್ಲಿ  22 ಬಾಲಕಿಯರು. ನಲ್ಕುದುರೆ ಗ್ರಾಮದ ಸರ್ಕಾರಿ ಪ್ರೌಢಶಾಲೆಯ 16 ಬಾಲಕಿಯರು. ಕೆಂಪನಹಳ್ಳಿ ಗ್ರಾಮದ ಸರ್ಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 09 ಬಾಲಕಿಯರಿಗೆ ಸೈಕಲ್‌ ವಿತರಿಸಿರುವುದಿಲ್ಲ. ಇವರಲ್ಲಿ ಪರಿಶಿಷ್ಟ ಜಾತಿಯ 18. ಪರಿಶಿಷ್ಟ ವರ್ಗ 12 ಹಾಗೂ ಇತರೆ 17ಬಾಲಕಿಯರು ಇದ್ದು ಅವರಲ್ಲಿ ಪರಿಶಿಷ್ಟ ಜಾತಿಗೆ ಸೇರಿದ ವಿದ್ಯಾರ್ಥಿನಿಯರೇ ಹೆಚ್ಚಾಗಿದ್ದಾರೆ.

ಈ ಸರ್ಕಾರಿ ಶಾಲೆಗಳಿಗೆ 4–5 ಕಿ.ಮೀ. ದೂರದಿಂದ ಬಾಲಕಿಯರು ನಡೆದುಕೊಂಡು ಬರುತ್ತಿದ್ದು, ಅವರ ಜೊತೆಯಲ್ಲಿ ಕಲಿಯುತ್ತಿರುವ ಬಾಲಕರು ಸೈಕಲ್‌ನಲ್ಲಿ ಬರುತ್ತಿರುವುದನ್ನು ಸಪ್ಪೆಮೋರೆ ಹಾಕಿಕೊಂಡು ನೋಡುತ್ತಾ ನಡೆದುಕೊಂಡು ಬರಬೇಕಾಗಿದೆ ಎನ್ನುತ್ತಾರೆ ನೊಂದ ಬಾಲಕಿಯೊಬ್ಬಳು.

ಶಿಕ್ಷಣ ಇಲಾಖೆಯು ಖಾಸಗಿ ಅನುದಾನಿತ ಶಾಲೆಗಳಿಗೆ ಬೇಡಿಕೆ ಇರುವಷ್ಟು ಸೈಕಲ್‌ ಪೂರೈಕೆ ಮಾಡಿದೆ. ಆದರೆ,  ಸರ್ಕಾರಿ ಶಾಲೆಗಳಿಗೆ ಬೇಡಿಕೆ ಇರುವಷ್ಟು ಪೂರೈಕೆ ಮಾಡದೇ ತಾರತಮ್ಯ ಮಾಡಿದೆ ಎಂದು ದೂರುತ್ತಾರೆ ಪೋಷಕರೊಬ್ಬರು.
ಶಿಕ್ಷಣ ಇಲಾಖೆಯು ಆದಷ್ಟು ಬೇಗನೆ 2012–13ನೇ ಸಾಲಿನಲ್ಲಿ ಬಾಲಕಿಯರಿಗೆ ಉಚಿತ ಸೈಕಲ್‌ ವಿತರಣೆ ಮಾಡಲಿ ಎಂದು ಪೋಷಕರು ಮನವಿ ಮಾಡಿದರು.   

‘ನಮಗೆ ಇದುವರೆಗೂ ಉಚಿತ ಸೈಕಲ್‌ ವಿತರಣೆ ಮಾಡಿಲ್ಲ. ಬಹಳ ತೊಂದರೆಯಾಗಿದೆ. ಸಂಬಂಧಪಟ್ಟವರು ಬೇಗನೆ ಸೈಕಲ್‌ ವಿತರಿಸಲು ಕ್ರಮ ಕೈಗೊಳ್ಳಬೇಕು’ ಎಂದು ವಿದ್ಯಾರ್ಥಿನಿಯರು ಒತ್ತಾಯಿಸಿದರು.

‘ಶಾಲೆಯಲ್ಲಿ ದಾಖಲಾದ ವಿದ್ಯಾರ್ಥಿಗಳ ಪಟ್ಟಿಯನ್ನು ಇಲಾಖೆಗೆ ನೀಡಿದ್ದೇವೆ. ಆದರೆ, ಬಾಲಕರಿಗೆ ಮಾತ್ರ ಸೈಕಲ್‌ ಸರಬರಾಜಾಗಿದ್ದು, ಅವುಗಳನ್ನು ವಿತರಿಸಿದ್ದೇವೆ. ಕಳೆದ ಸಾಲಿನ ಬೇಡಿಕೆ ಪಟ್ಟಿಯೊಂದಿಗೆ ಪ್ರಸಕ್ತ ಸಾಲಿನ ಬೇಡಿಕೆ ಪಟ್ಟಿಯನ್ನು ಜೊತೆಯಲ್ಲಿ ಸಲ್ಲಿಸಿದರೂ ಸಹ ಕಳೆದ ಸಾಲಿನ ಬೈಸಿಕಲ್‌ ಸರಬರಾಜು ಆಗಿಲ್ಲ’ ಎನ್ನುತ್ತಾರೆ ಶಿಕ್ಷಕರೊಬ್ಬರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.