ADVERTISEMENT

ಉತ್ತಮ ಮಳೆ: ಬಂಪರ್ ತೊಗರಿ ನಿರೀಕ್ಷೆ

​ಪ್ರಜಾವಾಣಿ ವಾರ್ತೆ
Published 20 ಅಕ್ಟೋಬರ್ 2011, 19:30 IST
Last Updated 20 ಅಕ್ಟೋಬರ್ 2011, 19:30 IST

ದೇವನಹಳ್ಳಿ: `ತಾಲ್ಲೂಕಿನಲ್ಲಿ ವಾರ್ಷಿಕ ವಾಡಿಕೆಯ ಸರಾಸರಿಗಿಂತ ಹೆಚ್ಚು ಮುಂಗಾರು ಮಳೆಯಾಗಿದ್ದು, ಎಲ್ಲಾ ಬೆಳೆಗಿಂತ ತೊಗರಿ ಹೆಚ್ಚು ಇಳುವರಿ ನೀಡುವ ಸಾಧ್ಯತೆ ಹೆಚ್ಚಿದೆ~ ಎಂದು ಕೃಷಿ ಇಲಾಖೆ ತಿಳಿಸಿದೆ.

ಪ್ರಸ್ತುತ ಸಾಲಿನಲ್ಲಿ 10,470 ಹೆಕ್ಟರ್ ಪ್ರದೇಶದಲ್ಲಿ ವಿವಿಧ ಬೆಳೆಗಳು ಭಿತ್ತನೆಯಾಗಿದ್ದರೂ, ರಾಗಿ ಮತ್ತು ಇತರೆ ಬೆಳೆ ಹೊರತುಪಡಿಸಿ 461 ಹೆಕ್ಟರ್ ಪ್ರದೇಶದಲ್ಲಿ ತೊಗರಿ ಬಿತ್ತನೆ ಮಾಡಲಾಗಿದೆ.

ಕಳೆದ ಸಾಲಿನಲ್ಲಿ 400 ಹೆಕ್ಟರ್ ಪ್ರದೇಶದಲ್ಲಿ ಪ್ರತಿ ಹೆಕ್ಟರ್‌ಗೆ ಸರಾಸರಿ ಹನ್ನೊಂದು ಕ್ವಿಂಟಾಲ್ ಇಳುವರಿ ಬಂದಿತ್ತು. ಈ ಬಾರಿ 400 ಹೆಕ್ಟರ್ ಪ್ರದೇಶದಲ್ಲಿ ತೊಗರಿ ಬೆಳೆಯಲು ನಿರ್ಧರಿಸಲಾಗಿತ್ತು. ಆದರೆ 281 ಹೆಕ್ಟರ್ ಖುಷ್ಕಿ ಪ್ರದೇಶ 180 ಹೆಕ್ಟರ್ ನೀರಾವರಿ ವಲಯ ಸೇರಿ ಹೆಚ್ಚುವರಿಯಾಗಿ 61 ಹೆಕ್ಟರ್‌ನಲ್ಲಿ ತೊಗರಿ ಬಿತ್ತನೆಯಾಗಿದ್ದು,  ಕೃಷಿ ಇಲಾಖೆಗೆ ಸಂತಸ ತಂದಿದೆ.

ವಾಡಿಕೆ ಸರಾಸರಿ ಮಳೆ: ಪ್ರಸಕ್ತ ಸಾಲಿನ ಅಕ್ಟೋಬರ್ ವರೆಗೆ ವಾಡಿಕೆ ಮಳೆ 736 ಮಿ.ಮೀ ಆಗಿದೆ. ಕಳೆದ ವರ್ಷ ಇದೇ ತಿಂಗಳ ವರದಿ ಆಧಾರಿಸಿದ್ದಲ್ಲಿ 633.2 ಮಿ.ಮೀ ಮಾತ್ರ ಮಳೆಯಾಗಿತ್ತು. ಕಳೆದ ತಿಂಗಳು ಇಪ್ಪತ್ತು ದಿನದವರೆಗೂ ಮಾತ್ರ ಮಳೆ ಕೈಕೊಟ್ಟಿತ್ತು. ಉಳಿದಂತೆ ಚದುರಿದಂತೆ ಮಳೆಯಾಗಿದ್ದರೂ ವಾಡಿಕೆಗಿಂತ 73.16 ಮಿ.ಮೀ ಹೆಚ್ಚುವರಿಯಾಗಿದ್ದು, ತೊಗರಿ ಶೇ.90 ರಷ್ಟು ಇಳುವರಿ ಕಾಣುವ ಸಾಧ್ಯತೆ ಇದೆ.

ಕೊಯ್ಲು: ತಾಲ್ಲೂಕಿನಲ್ಲಿ ಶೇ. 80 ರಷ್ಟು ಬಿ.ಆರ್.ಜಿ 1 ತೊಗರಿ ಬಿತ್ತನೆಯಾಗಿದೆ. ಬಿತ್ತನೆ ಮಾಡಿ ಫಸಲನ್ನು ಪಡೆಯುವ ಅವಧಿ 170 ರಿಂದ 190 ದಿನಗಳು. ಬಿತ್ತನೆ ಮಾಡಿದ 150 ದಿನದಿಂದಲೇ ಕಾಯಿ ಪಡೆಯಬಹುದು ಹಾಗೂ ನಿರಂತರ 25 ದಿನಗಳವರೆಗೆ ಮುಂದುವರೆಸಬಹುದು.

ರೋಗಗಳು: ಕಾಯಿ ಕೊರೆಯುವ ಹುಳು, ಮತ್ತು ಹೂವಿನ ಮೊಗ್ಗು ಅಲ್ಲದೆ ಕುಡಿಯನ್ನು ತಿನ್ನುವ ಹುಳುಗಳು, ಬೆಳೆಗೆ ಮಾರಕವಾಗಿದೆ.  ಕಾಯಿಗಳ ಮೇಲೆ ರಂದ್ರ ಮಾಡುವ ಹುಳು ರಕ್ಷಿಸಲು ಮೋಲಾಥಿಯಾನ್ ಪೌಡರ್ ಉದುರಿಸಬೇಕು. ಇಲ್ಲವೆ ಪ್ರತಿ ಹೆಕ್ಟರ್‌ಗೆ 25 ಕೆ.ಜಿ ಮೊದಲ ಹಂತದಲ್ಲಿ ನಿಯಂತ್ರಿಸಲು ಎನ್‌ಪಿ.ವಿ ಔಷಧಿ ಸಿಂಪರಣೆ ಮಾಡಿದ್ದಲ್ಲಿ ಬೆಳೆಗೆ ಬರುವ ರೋಗ ತಡೆಗಟ್ಟಬಹುದು. ಹೆಚ್ಚಿನ ಮಾಹಿತಿಗಗಿ ರೈತ ಸಂಪರ್ಕ ಕೇಂದ್ರಗಳು ಹಾಗೂ ಕೃಷಿ ಇಲಾಖೆಯನ್ನು ಸಂಪರ್ಕಿಸಿ ಸಕಾಲದಲ್ಲಿ ಎಚ್ಚರಿಕೆ ವಹಿಸುವುದು ಸೂಕ್ತವೆಂದು ಇಲಾಖೆ ತಿಳಿಸಿದೆ,

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.