ADVERTISEMENT

ಊಟದಲ್ಲಿ ಹಲ್ಲಿ: 200 ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥ

​ಪ್ರಜಾವಾಣಿ ವಾರ್ತೆ
Published 17 ಸೆಪ್ಟೆಂಬರ್ 2011, 19:30 IST
Last Updated 17 ಸೆಪ್ಟೆಂಬರ್ 2011, 19:30 IST

ತಿಪಟೂರು: ಹಲ್ಲಿ ಬಿದ್ದಿದ್ದ ಬಿಸಿಯೂಟ ಸೇವಿಸಿದ ತಾಲ್ಲೂಕಿನ ನೊಣವಿನಕೆರೆ ಕಾಡಸಿದ್ದೇಶ್ವರ ಶಾಲೆಯ 200ಕ್ಕೂ ಹೆಚ್ಚು ಮಕ್ಕಳಿಗೆ ನಗರದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿದ ಘಟನೆ ಶನಿವಾರ ನಡೆದಿದೆ.

ಕಾಡಸಿದ್ದೇಶ್ವರ ಶಾಲೆಯಲ್ಲಿ ಶನಿವಾರ ಬೆಳಗ್ಗೆ ಊಟ ಸೇವಿಸುವಾಗ ಒಬ್ಬ ವಿದ್ಯಾರ್ಥಿಗೆ ಹಲ್ಲಿ ಸಿಕ್ಕಿದ್ದರಿಂದ ಆತನೊಂದಿಗೆ ಐದಾರು ಮಕ್ಕಳಿಗೆ ವಾಂತಿ ಕಾಣಿಸಿಕೊಂಡಿತು. ಇದರಿಂದ ಘಾಸಿಗೊಂಡ ಇತರ ಮಕ್ಕಳೂ ಅಸ್ವಸ್ಥ ಮನಸ್ಥಿತಿ ತಲುಪಿದರು.

ಕೂಡಲೇ ಎಲ್ಲರನ್ನು ನಗರದ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಾಯಿಸಲಾಯಿತು. ಮಕ್ಕಳು ಅಸ್ವಸ್ಥಗೊಂಡಿದ್ದಾರೆ ಎಂಬ ಸುದ್ದಿ ತಿಳಿದು ಗಾಬರಿಗೊಂಡ ಪೋಷಕರು ಆಸ್ಪತ್ರೆಗೆ ದೌಡಾಯಿಸಿದರು. ಸಂಜೆ ವೇಳೆಗೆ ಎಲ್ಲ ಮಕ್ಕಳನ್ನು ಆಸ್ಪತ್ರೆಯಿಂದ ಕಳುಹಿಸಲಾಯಿತು.

ಆರೋಪ: ಹಲ್ಲಿ ಸಿಕ್ಕಿದ್ದನ್ನು ತೋರಿಸಿದ ಬಾಲಕನಿಗೆ ಶಾಲೆಯ ಶಿಕ್ಷಕರೊಬ್ಬರು ಹೊಡೆದಿದ್ದಲ್ಲದೆ ವಿಷಯ ಬಹಿರಂಗ ಪಡಿಸದಂತೆ ಒತ್ತಡ ಹಾಕಿದರು. ಐದಾರು ಮಕ್ಕಳು ವಾಂತಿ ಮಾಡಿಕೊಳ್ಳುತ್ತಿದ್ದರೂ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲು ಧಾವಂತ ತೋರದೆ ಶಿಕ್ಷಕರು ನಿರ್ಲಕ್ಷ್ಯ ವಹಿಸಿದ್ದರು ಎಂದು ಹಲವು ಪೋಷಕರು ಆಸ್ಪತ್ರೆಯಲ್ಲಿ ದೂರಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.