ADVERTISEMENT

ಎರಡು ವರ್ಷದ `ಸೂರ್ಯ' ಸ್ವತಂತ್ರ

​ಪ್ರಜಾವಾಣಿ ವಾರ್ತೆ
Published 6 ಡಿಸೆಂಬರ್ 2012, 15:24 IST
Last Updated 6 ಡಿಸೆಂಬರ್ 2012, 15:24 IST

ಶಿವಮೊಗ್ಗ: ಎರಡು ವರ್ಷ 2 ತಿಂಗಳ ಮರಿ ಸೂರ್ಯ ಇನ್ನು ಮುಂದೆ ಸ್ವತಂತ್ರ. ತಾಯಿ ನೇತ್ರಾವತಿ ಒಂದು ಕಡೆಯಾದರೆ ಮಗು ಸೂರ್ಯ ಇನ್ನೊಂದು ಕಡೆ. ತಾಯಿ ಹಾಲು, ಅಪ್ಪುಗೆ ಎಲ್ಲವೂ ಇನ್ನು ಮುಂದೆ ಸೂರ್ಯನಿಗೆ ನೆನಪು ಮಾತ್ರ.

ಇದು ಇಲ್ಲಿಗೆ ಸಮೀಪದ ಸಕ್ರೆಬೈಲ್ ಆನೆಬಿಡಾರದಲ್ಲಿ ತಾಯಿ-ಮಗ ಬೇರೆಯಾದ ಕಥೆ. ಮಂಗಳವಾರ ಆನೆಬಿಡಾರದಲ್ಲಿ ಸೂರ್ಯನನ್ನು 13 ವರ್ಷದ ತಾಯಿ ನೇತ್ರಾವತಿಯ ಆರೈಕೆಯಿಂದ ಬೇರೆ ಮಾಡಲಾಯಿತು.

ಕೊನೆಯ ಬಾರಿಗೆ ತಾಯಿಯ ಹಾಲು ಕುಡಿದ ಸೂರ್ಯ, ತಾಯಿಯನ್ನು ಬಿಟ್ಟು ಬಿಡಾರಕ್ಕೆ ತೆರಳಲು ಮನಸ್ಸಿಲ್ಲದ ಮನಸ್ಸಿನಿಂದ ಹೆಜ್ಜೆ ಹಾಕಿದ. ತಾಯಿಗೂ ಅಷ್ಟೇ ಮಗನನ್ನು ಬಿಟ್ಟು ಕಾಡಿಗೆ ಒಬ್ಬಂಟಿಯಾಗಿ ಭಾರವಾದ ಹೆಜ್ಜೆ ಹಾಕಿದಳು. ತಾಯಿ-ಮಗನ ಬೇರೆ ಮಾಡುವ ಅಂತಿಮ ಕ್ಷಣಕ್ಕೆ ಸಾಕ್ಷಿಯಾದ ಎಲ್ಲರ ಹೃದಯ ಭಾರವಾಗಿತ್ತು.   

ಇನ್ನು ಮುಂದೆ ಸೂರ್ಯ ಮಾವುತನ ಮಾರ್ಗದರ್ಶನದಲ್ಲಿ ಬಿಡಾರದಲ್ಲಿ ಬೆಳೆಯುತ್ತದೆ. ಸೂರ್ಯನ ಪ್ರತಿ ಚಲನವಲನಗಳನ್ನು ತಿದ್ದಿ, ತೀಡುವ ಕೆಲಸ ಈಗ ಮಾವುತರದ್ದು ಎನ್ನುತ್ತಾರೆ ಅರಣ್ಯ ಉಪ ಸಂರಕ್ಷಣಾಧಿಕಾರಿ (ವನ್ಯಜೀವಿ) ಟಿ.ಜೆ. ರವಿಕುಮಾರ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.