ADVERTISEMENT

ಎಲ್ಲರೂ ಶಿಕ್ಷಣ ಪಡೆಯಲು ಕಾಯ್ದೆ ಸಹಕಾರಿ

​ಪ್ರಜಾವಾಣಿ ವಾರ್ತೆ
Published 11 ಆಗಸ್ಟ್ 2012, 19:30 IST
Last Updated 11 ಆಗಸ್ಟ್ 2012, 19:30 IST

ಶಿವಮೊಗ್ಗ: ಪ್ರಸ್ತುತ ಕಡ್ಡಾಯ ಶಿಕ್ಷಣ ಹಕ್ಕು ಕಾಯ್ದೆ 6ರಿಂದ 14ವರ್ಷದವರೆಗಿನ ಮಕ್ಕಳು ಕಡ್ಡಾಯವಾಗಿ ಗುಣಮಟ್ಟದ ಶಿಕ್ಷಣ ಪಡೆಯಲು ಸಹಾಯಕವಾಗಿದೆ ಎಂದು ಸರ್ವ ಶಿಕ್ಷಾ ಅಭಿಯಾನದ ಉಪ ಸಮನ್ವಯ ಅಧಿಕಾರಿ ಕೆ. ಗಣಪತಿ ಅಭಿಪ್ರಾಯಪಟ್ಟರು.

ಮಹಾತ್ಮ ಗಾಂಧಿ ಗ್ರಾಮೀಣಾಭಿವೃದ್ಧಿ ಟ್ರಸ್ಟ್ ಮತ್ತು ಸಮಾಜ ಪರಿವರ್ತನಾ ಟ್ರಸ್ಟ್ ಸಂಯುಕ್ತವಾಗಿ ರವೀಂದ್ರನಗರದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಶನಿವಾರ ಹಮ್ಮಿಕೊಂಡಿದ್ದ `ಕಡ್ಡಾಯ ಶಿಕ್ಷಣ ಹಕ್ಕು ಕಾಯ್ದೆ~ ಕುರಿತ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಮೂಲ ಹಕ್ಕುಗಳಲ್ಲಿ ಮಕ್ಕಳ ಕಡ್ಡಾಯ ಶಿಕ್ಷಣವೂ ಒಂದಾಗಿದೆ. ಸರ್ವ ಶಿಕ್ಷಾ ಅಭಿಯಾನದ ಮೂಲಕ ಜನವಸತಿ ಪ್ರದೇಶದಲ್ಲೇ ಮಕ್ಕಳಿಗೆ ಶಾಲೆಗಳನ್ನು ಒದಗಿಸಲಾಗಿದೆ. ಆದರೀಗ ಕಡ್ಡಾಯ ಶಿಕ್ಷಣ ಹಕ್ಕು ಕಾಯ್ದೆ ಮೂಲಕ ಸಮಾಜದಲ್ಲಿ ಸಾಮಾಜಿಕವಾಗಿ, ಆರ್ಥಿಕವಾಗಿ ಹಿಂದುಳಿದಿರುವ ಮಕ್ಕಳೂ ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಶೇ 25 ಮೀಸಲಾತಿ ಅನ್ವಯ ಶಿಕ್ಷಣ ಪಡೆಯಲು ಅವಕಾಶ ನೀಡಲಾಗಿದೆ ಎಂದು ತಿಳಿಸಿದರು.

ಕಾಯ್ದೆಯ ಪ್ರಕಾರ ನಿರ್ದಿಷ್ಠ ದಾಖಲಾತಿಗಳನ್ನು ಹೊಂದಿಲ್ಲ ಎಂದು ಮಕ್ಕಳನ್ನು ದಾಖಲು ಮಾಡಿಕೊಳ್ಳಲು ನಿರ್ಲಕ್ಷ್ಯ ವಹಿಸುವಂತಿಲ್ಲ. ಜಾತಿ, ಭಾಷೆ, ಲಿಂಗದ ಆಧಾರದಲ್ಲಿ ಯಾವುದೇ ತಾರತಮ್ಯವನ್ನು ಮಾಡುವಂತಿಲ್ಲ. ಮಾನಸಿಕ ಹಾಗೂ ದೈಹಿಕವಾಗಿ ಹಿಂಸಿಸುವಂತಿಲ್ಲ. ಮಕ್ಕಳ ಮನಸ್ಸನ್ನು ಅರಿತು ಶಿಶುಸ್ನೇಹಿ ಪರಿಸರದಲ್ಲಿ ಶಿಕ್ಷಣ ಒದಗಿಸಬೇಕು ಎಂದು ಶಿಕ್ಷಕರಿಗೆ ಸೂಚನೆ ನೀಡಿದೆ ಎಂದರು.

ಮಹಾತ್ಮ ಗಾಂಧಿ ಗ್ರಾಮೀಣಾಭಿವೃದ್ಧಿ ಟ್ರಸ್ಟ್‌ನ ಕೆ.ಸಿ. ಬಸವರಾಜು ಅಧ್ಯಕ್ಷತೆ ವಹಿಸಿದ್ದರು. ಮಕ್ಕಳ ಕಲ್ಯಾಣ ಸಮಿತಿ ಮಾಜಿ ಅಧ್ಯಕ್ಷ ಈಶ್ವರಪ್ಪ, ವಿಕಾಸ ಟ್ರಸ್ಟ್ ಮುಖ್ಯಸ್ಥ ಮೈಲಾರಿ, ನಿವೃತ್ತ ವಾರ್ತಾಧಿಕಾರಿ ಬಿ.ಎಸ್. ತಿಮ್ಮೊಲಿ, ಸಾರ್ವಜನಿಕ ಶಿಕ್ಷಣ ಇಲಾಖೆ ಸಂಪನ್ಮೂಲ ವ್ಯಕ್ತಿ ಶಿವಕುಮಾರ್ ಇದ್ದರು. ಅಂಜಲಿ ಸ್ವಾಗತಿಸಿದರು. ನೋರಾ ಮೆಟಿಲ್ಡಾ ಫ್ರೀಕ್ವೇರಾ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.