ADVERTISEMENT

ಏಕಮುಖ ಸಂಸ್ಕೃತಿಯ ವಿಜೃಂಭಣೆ: ವಿಷಾದ

​ಪ್ರಜಾವಾಣಿ ವಾರ್ತೆ
Published 18 ಏಪ್ರಿಲ್ 2012, 19:30 IST
Last Updated 18 ಏಪ್ರಿಲ್ 2012, 19:30 IST

ಶಿವಮೊಗ್ಗ: ಹಿಂದಿನ ಜನ ಮೌಖಿಕ ಪರಂಪರೆಯ ಮೂಲಕ ಸಂಸ್ಕೃತಿಯ ಅನನ್ಯತೆ ಕಾಯ್ದುಕೊಂಡಿದ್ದರು. ವೈವಿಧ್ಯದ ಭಾರತದಲ್ಲಿ ಈಗ ಏಕಮುಖ ಸಂಸ್ಕೃತಿ ವಿಜೃಂಭಿಸುತ್ತಿದೆ ಎಂದು ರಂಗತಜ್ಞ ಸಿ. ಬಸವಲಿಂಗಯ್ಯ ವಿಷಾದಿಸಿದರು.

ಸಹ್ಯಾದ್ರಿ ಕಲಾ ಮತ್ತು ವಾಣಿಜ್ಯ ಕಾಲೇಜಿನ ಭಾಷಾಶಾಸ್ತ್ರ ವಿಭಾಗ ಸಿಎನ್‌ಆರ್ ರಾವ್ ಸಭಾಂಗಣದಲ್ಲಿ ಬುಧವಾರ ಹಮ್ಮಿಕೊಂಡಿದ್ದ `ವಿದ್ಯಾರ್ಥಿ ವಿಚಾರಸಂಕಿರಣ~ ಉದ್ಘಾಟಿಸಿ ಅವರು ಮಾತನಾಡಿದರು.

ಕತೆ, ಕಾದಂಬರಿ, ವಿಮರ್ಶೆ ಎಲ್ಲವೂ ಇಂದು ದಿಕ್ಕೆಟ್ಟಿವೆ. ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ಹೊಸ ಮಾರ್ಗ ಹುಟ್ಟು ಹಾಕಬೇಕು ಎಂದು ಸಲಹೆ ನೀಡಿದರು.

ಇಂದು ರಾಜಕಾರಣಿಗಳು ಅಧಿಕಾರಕ್ಕಾಗಿ ಪ್ರಜಾಪ್ರಭುತ್ವ ಮೌಲ್ಯಗಳನ್ನು ಗಾಳಿಗೆ ತೂರಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ವಿದ್ಯಾರ್ಥಿಗಳಿಗೆ ಇಂದು ಸಚಿನ್ ತೆಂಡೂಲ್ಕರ್, ಸಿನಿಮಾ ತಾರೆಗಳು ಆದರ್ಶ ಆಗಿದ್ದಾರೆ. ಆದರೆ, ದಶರಥ ಮಾಂಗ್ ಮತ್ತು ಲಾಲ್ ಬಹದ್ದೂರ್‌ಶಾಸ್ತ್ರಿ ಅಂತಹವರು ನಿಜವಾದ ಆದರ್ಶವಾಗಬೇಕು ಎಂದು ಕಿವಿ ಮಾತು ಹೇಳಿದರು.

`ನಾನು ನಾಟಕಗಳಲ್ಲಿ ಗುಡ್ಡ ಕಡಿದು ರಸ್ತೆ ಮಾಡಿದ ದಶರಥ ಮಾಂಗ್ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಅವರಂತಹ ಆದರ್ಶ ವ್ಯಕ್ತಿಗಳನ್ನು ಚಿತ್ರಿಸುವ ಕೆಲಸ ಮಾಡುತ್ತಿದ್ದೇನೆ~ ಎಂದರು.

ಪ್ರಾಂಶುಪಾಲ ಡಾ.ಬಿ.ಎಸ್. ಮಹದೇವಯ್ಯ ಅಧ್ಯಕ್ಷತೆ ವಹಿಸಿದ್ದರು. ಚಿಂತಕರಾದ ಡಾ.ಆರ್. ಚಲಪತಿ, ಡಾ.ಡಿ.ಡೊಮಿನಿಕ್, ಪ್ರೊ.ಸಿರಾಜ್ ಅಹಮದ್ ಉಪಸ್ಥಿತರಿದ್ದರು.

ಭಾಷಾಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ಮೇಟಿ ಮಲ್ಲಿಕಾರ್ಜುನ ಪ್ರಾಸ್ತಾವಿಕ ಮಾತನಾಡಿದರು.

ವಿದ್ಯಾರ್ಥಿಗಳಾದ ರಮೇಶ್ ಸ್ವಾಗತಿಸಿ, ಶಶಿಧರ್ ವಂದಿಸಿದರು. ಕೆ. ಭಾಸ್ಕರ್ ನಿರೂಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.