ADVERTISEMENT

ಒಂದು ವರ್ಷದ ಮರಿಯಾನೆ ಸಾವು

​ಪ್ರಜಾವಾಣಿ ವಾರ್ತೆ
Published 4 ಮೇ 2012, 19:30 IST
Last Updated 4 ಮೇ 2012, 19:30 IST

ಶನಿವಾರಸಂತೆ: ಕೊಡ್ಲಿಪೇಟೆ ಹೋಬಳಿ ವ್ಯಾಪ್ತಿಯಲ್ಲಿ ಸುಮಾರು 1 ವರ್ಷದ ಗಂಡು ಕಾಡಾನೆ ಮರಿಯೊಂದು ಸಾವಿಗೀಡಾಗಿದೆ.

ಕೊಡ್ಲಿಪೇಟೆ ಸಮೀಪದ ಕಲ್ಲಳ್ಳಿ ಮಠದ ಜಾಗದಲ್ಲಿ ಮಂಗಳವಾರ 2 ಮರಿಯಾನೆಗಳು ಸೇರಿದಂತೆ ಒಟ್ಟು 10 ಕಾಡಾನೆಗಳು  ಬೆಳೆ ನಾಶ ಮಾಡಿ ಜನರಲ್ಲಿ ಭೀತಿ ಮೂಡಿಸಿದ್ದವು. ಅಂದು ರಾತ್ರಿ ಅರಣ್ಯ ಇಲಾಖೆಯವರು ಪಟಾಕಿ ಸಿಡಿಸಿ ಕಾಡಾನೆಗಳನ್ನು ಓಡಿಸುತ್ತಿದ್ದಾಗ ಕ್ಯಾತೆ ಗ್ರಾಮದ ಜಾವಿದ್ ಹುಸೇನ್ ಎಂಬುವವರಿಗೆ ಸೇರಿದ ಜಾಗದಲ್ಲಿ ಆನೆಯೊಂದರ ದಂತ ಈ ಮರಿಯ ಹೊಟ್ಟೆಯ ಭಾಗಕ್ಕೆ ತಗಲಿ  ತೀವ್ರ ರಕ್ತ ಸ್ರಾವವಾಗಿ ಮೃತಪಟ್ಟಿತು ಎಂದು ತಿಳಿದು ಬಂದಿದೆ.ವಲಯ ಅರಣ್ಯಾಧಿಕಾರಿ ಜಯಪ್ರಕಾಶ್ ಮತ್ತು ಸಿಬ್ಬಂದಿ ಮಹಜರು ನಡೆಸಿದರು.

ಸೋಮವಾರಪೇಟೆ ಪಶು ವೈದ್ಯಾಧಿಕಾರಿ ಶಿವರಾಜು ಮರಣೋತ್ತರ ಪರೀಕ್ಷೆ ನಡೆಸಿದರು. ಗುರುವಾರ ರಾತ್ರಿ ಅರಣ್ಯ ಇಲಾಖೆ ಸಿಬ್ಬಂದಿ ಹಾಗೂ ಗ್ರಾಮಸ್ಥರು ಮರಿಯಾನೆಯ ಮೃತದೇಹಕ್ಕೆ ಪೂಜೆ ಸಲ್ಲಿಸಿ ಬಳಿಕ ದಹಿಸಿದರು.

ಬಿಳಿಗಿರಿರಂಗನಬೆಟ್ಟ: ಹೆಣ್ಣಾನೆ ಸಾವು

ಯಳಂದೂರು: ತಾಲ್ಲೂಕಿನ ಪ್ರಸಿದ್ಧ ಅರಣ್ಯ ಧಾಮ ಬಿಳಿಗಿರಿರಂಗನಬೆಟ್ಟದ ಬೆಟ್ಟದ ಪುರಾಣಿ ಪೋಡು ಬಳಿಯ ಆಮೆಕೆರೆ ಬೀಟ್‌ನಲ್ಲಿ ಹೆಣ್ಣಾನೆ ಸಾವನ್ನಪ್ಪಿದೆ.

ಇದು ಬುಧವಾರ ಸಾವನ್ನಪ್ಪಿರಬಹುದೆಂದು ಶಂಕಿಸಲಾಗಿದೆ. 40 ರಿಂದ 45 ವರ್ಷ ವಯಸ್ಸಿನ ಹೆಣ್ಣಾನೆಯು 15 ದಿನಗಳಿಂದ ಮೂಲವ್ಯಾಧಿ ಬಾಧೆಯಿಂದ ಬಳಲುತ್ತಿತ್ತು. ಅಲ್ಲದೆ ಇಲಾಖೆಯ ಅಧಿಕಾರಿಗಳು ಇದರ ಮೇಲೆ ನಿಗಾ ವಹಿಸಿದ್ದರು ಎಂದು ಆರ್‌ಎಫ್‌ಓ ನಾಗರಾಜು `ಪ್ರಜಾವಾಣಿ~ಗೆ ತಿಳಿಸಿದರು.  ಮರಣೋತ್ತರ ಪರೀಕ್ಷೆ ನಡೆಸಲಾಗಿದ್ದು ಇನ್ನಷ್ಟು ಮಾಹಿತಿಗಾಗಿ ಕಾದಿರುವುದಾಗಿ ಅವರು ತಿಳಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.