ADVERTISEMENT

ಕಡಬ ಕಾಲೊನಿ: ಭಾನಾಮತಿ ಭೀತಿ

​ಪ್ರಜಾವಾಣಿ ವಾರ್ತೆ
Published 15 ಅಕ್ಟೋಬರ್ 2011, 19:30 IST
Last Updated 15 ಅಕ್ಟೋಬರ್ 2011, 19:30 IST

ಗುಬ್ಬಿ: ತಾಲ್ಲೂಕಿನ ಕಡಬ ಗ್ರಾಮದ ಕಾಲೊನಿಯಲ್ಲಿ ಮನೆಗಳ ಮೇಲೆ ಬೀಳುತ್ತಿರುವ ಕಲ್ಲು ಸ್ಥಳೀಯ ಜನತೆಯಲ್ಲಿ ಭಾನಾಮತಿಯ ಭೀತಿ ಹುಟ್ಟಿಸಿದೆ.

ಹದಿನೈದು ದಿನದ ಹಿಂದೆ ಕಡಬ ಕಾಲೊನಿಯ ಕೆ.ಆರ್.ರಂಗಸ್ವಾಮಿ ಹಾಗೂ ಮಹದೇವಮ್ಮ ಎಂಬುವವರ ಮನೆಯ ಮೇಲೆ ದಿನಕ್ಕೆ ಎರಡು ಅಥವಾ ಮೂರು ಬಾರಿ ಕಲ್ಲು ಬೀಳತೊಡಗಿತು. ಪುಂಡು ಹುಡುಗರ ಕುಚೇಷ್ಟೆ ಮಾಡುತ್ತಿರಬಹುದು ಎಂದು ಸುಮ್ಮನಾಗಿದ್ದರು. ಕಳೆದ ಮೂರು ದಿನಗಳಿಂದ ಹಗಲು, ರಾತ್ರಿ ಕಲ್ಲು ಬೀಳುತ್ತಿದ್ದು, ಭಾನಾಮತಿ ಶಂಕೆ ಹೆಚ್ಚಿದೆ.

ಶುಕ್ರವಾರ ರಾತ್ರಿ ಐದು ತಾಸು ಕಾಲೊನಿಯ ಒಂದು ಬೀದಿಯ ಏಳು ಮನೆ ಮೇಲೆ ಬಿದ್ದ ಕಲ್ಲಿನಿಂದ ಶೀಟ್ ಒಡೆದು ಹೋಗಿದೆ. ಮಹದೇವಮ್ಮ ಎಂಬಾಕೆ ಕಾಲಿಗೆ ತಗುಲಿದ ಕಲ್ಲೇಟು ಹಾಸಿಗೆ ಹಿಡಿಯುವಂತೆ ಮಾಡಿದೆ. ಕಿಡಿಗೇಡಿಗಳ ಕೃತ್ಯ ಎಂದು ತಿಳಿದ ಕೆಲ ಯುವಕರು ಕಲ್ಲು ಬೀಳುವ ಸಂದರ್ಭದಲ್ಲಿ ಧೈರ್ಯದಿಂದ ಕಲ್ಲು ಹಾದು ಬಂದ ಹಾದಿಯಲ್ಲಿ ಹುಡುಕಾಟ ನಡೆಸಿದ್ದಾರೆ. ಆದರೆ ಯಾವ ಸುಳಿವು ಪತ್ತೆಯಾಗಿಲ್ಲ. ಇದರಿಂದಾಗಿ ಕಾಲೊನಿಯಲ್ಲಿ ಆತಂಕ ಮನೆಮಾಡಿದೆ.

ಕಡಬ ಪೊಲೀಸ್ ಉಪಠಾಣೆಗೆ ದೂರು ಸಲ್ಲಿಸಲು ಮುಂದಾದ ವೇಳೆ ಪೊಲೀಸರು ಶಂಕೆ ವ್ಯಕ್ತಪಡಿಸಿ ಯಾರ ಮೇಲಾದರೂ ದೂರು ಸಲ್ಲಿಸಲು ಸೂಚಿಸಿದ್ದಾರೆ. ದೂರು ದಾಖಲಾಗಿಲ್ಲ, ರಕ್ಷಣೆಯೂ ಸಿಗುತ್ತಿಲ್ಲ ಎನ್ನುತ್ತಾರೆ ಸ್ಥಳೀಯ ನಿವಾಸಿ ರಂಗಸ್ವಾಮಿ.

ಮೂರು ದಿನಗಳಿಂದ ನಿದ್ದೆ ಮಾಡಿಲ್ಲ. ಒಡೆದು ಹೋದ ಶೀಟುಗಳ ರಿಪೇರಿ ಮಾಡಲು ನಮ್ಮಲ್ಲಿ ಹಣವಿಲ್ಲ ಎಂದು ನಿವಾಸಿ ತಿಮ್ಮಕ್ಕ ಅಳಲು ತೋಡಿಕೊಂಡರು. ಯಾವುದೇ ಸಂಘರ್ಷ, ವೈಷಮ್ಯಕ್ಕೆ ಆಸ್ಪದ ಇಲ್ಲದ ಈ ಕಾಲೊನಿ ಜನತೆಯಲ್ಲಿ ಕಲ್ಲು ಬೀಳುತ್ತಿರುವುದು ಆತಂಕ ತರಿಸಿದೆ. ಮನೆಗಳನ್ನು ತೊರೆಯುವ ಚಿಂತನೆ ನಡೆದಿದೆ ಎಂದು ಯೋಗೀಶ್ ತಮ್ಮ ಅಸಹಾಯಕತೆ ವ್ಯಕ್ತಪಡಿಸಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.