ADVERTISEMENT

ಕನ್ನಡತೇರು ಕಲಾವಿದರಿಗೆ ಇಲಾಖೆ ಅವಮಾನ

​ಪ್ರಜಾವಾಣಿ ವಾರ್ತೆ
Published 8 ಮಾರ್ಚ್ 2011, 18:30 IST
Last Updated 8 ಮಾರ್ಚ್ 2011, 18:30 IST
ಕನ್ನಡತೇರು ಕಲಾವಿದರಿಗೆ ಇಲಾಖೆ ಅವಮಾನ
ಕನ್ನಡತೇರು ಕಲಾವಿದರಿಗೆ ಇಲಾಖೆ ಅವಮಾನ   

ಕನಕಗಿರಿ: ಬೆಳಗಾವಿಯಲ್ಲಿ ನಡೆಯಲಿರುವ ವಿಶ್ವ ಕನ್ನಡ ಸಮ್ಮೇಳನದ ಹಿನ್ನೆಲೆಯಲ್ಲಿ ‘ವಿಶ್ವ ಕನ್ನಡ ತೇರು’ ಜತೆ ಆಗಮಿಸಿದ್ದ ಕಲಾವಿದರಿಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಅವಮಾನ ಮಾಡಿರುವ ಘಟನೆ ನಡೆದಿದೆ.ಜಿಲ್ಲೆಯ ಐತಿಹಾಸಿಕ ತಾಣಗಳ ಚಿತ್ರಗಳನ್ನು ಹೊಂದಿರುವ ಕನ್ನಡ ತೇರಿನ ಜತೆಗೆ ಬಂದಿರುವ ಕಲಾವಿದರಿಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಅಧಿಕಾರಿಗಳು ಅಗತ್ಯ ಸೌಲಭ್ಯ ಒದಗಿಸದಿದ್ದ ಕಾರಣ ಹತ್ತಾರು ಕಲಾವಿದರು ಸೊಳ್ಳೆ ಕಡಿಸಿಕೊಂಡು ಬಸ್ ನಿಲ್ದಾಣದಲ್ಲೇ ಮಲಗಿ ರಾತ್ರಿ ಕಳೆಯಬೇಕಾಯಿತು.

‘ವಸತಿ ಸೌಕರ್ಯ ಕುರಿತು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ರಾಜೇಂದ್ರ ಪ್ರಸಾದ ಅವರನ್ನು ದೂರವಾಣಿಯಲ್ಲಿ ಸಂಪರ್ಕಿಸಿದರೂ ಯಾವುದೇ ಉಪಯೋಗವಾಗಲಿಲ್ಲ‘ ಎಂದು ಕಲಾವಿದರು ಅಸಮಾಧಾನ ವ್ಯಕ್ತಪಡಿಸಿದರು.’ಇದ್ದರೆ ಅಲ್ಲಿ ಇರಿ, ಇಲ್ಲಂದ್ರೆ ಊರಿಗೆ ಬನ್ನಿ. ಯಾವುದೇ ಸೌಕರ್ಯ ಕಲ್ಪಿಸುವ ಬಗ್ಗೆ ನನಗೆ ಆದೇಶ ಇಲ್ಲ’ ಎಂಬ ಬೇಜವಾಬ್ದಾರಿ ಮಾತುಗಳಿಂದ ನೋಯಿಸಿ ಅವಮಾನ ಮಾಡಿದರು‘ ಎಂದು ಕಲಾವಿದರು ದೂರಿದರು.

‘ಕನ್ನಡ ತೇರು ಪಟ್ಟಣಕ್ಕೆ ಆಗಮಿಸುವ ಬಗ್ಗೆ ಜಿಲ್ಲಾಡಳಿತ, ಇತರ ಅಧಿಕಾರಿಗಳು ತಮಗೆ ಯಾವುದೇ ಮಾಹಿತಿ ನೀಡಿಲ್ಲ, ಆಡಳಿತ ಯಂತ್ರದ ನಿರ್ಲಕ್ಷ್ಯ ಭಾವನೆ ಖಂಡನೀಯ‘ ಎಂದು ಸ್ಥಳಕ್ಕೆ ಆಗಮಿಸಿದ ಜಿಲ್ಲಾ ಪಂಚಾಯಿತಿ ಸದಸ್ಯ ಗಂಗಣ್ಣ ಸಮಗಂಡಿ ತಿಳಿಸಿದರು.ಕಲಾವಿದರಿಗೆ ಮುಂಜಾನೆ ಚಹಾ ವ್ಯವಸ್ಥೆ ಮಾಡಿಸಿದ ಎಪಿಎಂಸಿ ಮಾಜಿ ಅಧ್ಯಕ್ಷ ಡಾ. ಅರವಟಗಿಮಠ ಕೂಡ ಅಧಿಕಾರಿಗಳ ಕಾರ್ಯವೈಖರಿ ಬಗ್ಗೆ ಕಿಡಿ ಕಾರಿದರು.

ಮಂಗಳವಾರ ಬೆಳಿಗ್ಗೆ ಸರ್ಕಾರಿ ಪದವಿಪೂರ್ವ ಕಾಲೇಜಿನ ಉಪಪ್ರಾಂಶುಪಾಲ ಎಚ್. ಕೆ. ಚಂದ್ರಪ್ಪ   ಮತ್ತು ವಿದ್ಯಾರ್ಥಿಗಳು ಪ್ರವಾಸಿ ಮಂದಿರದ ರಸ್ತೆಯಲ್ಲಿ ತಾಯಿ ಭುವನೇಶ್ವರಿ ಭಾವಚಿತ್ರಕ್ಕೆ ಹೂವಿನಹಾರ ಹಾಕಿ ಸ್ವಾಗತಿಸಿದರು.ವಿದ್ಯಾರ್ಥಿಗಳು ಚಪ್ಪಾಳೆ ತಟ್ಟಿ ಸಮ್ಮೇಳನ ಯಶಸ್ವಿಯಾಗಲಿ ಎಂದು ಶುಭ ಹಾರೈಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.