ADVERTISEMENT

ಕರ್ಜಗಿಯಲ್ಲಿ ಗಾಂಧೀಜಿ ಪುತ್ಥಳಿ ಅನಾವರಣ

​ಪ್ರಜಾವಾಣಿ ವಾರ್ತೆ
Published 2 ಅಕ್ಟೋಬರ್ 2012, 19:30 IST
Last Updated 2 ಅಕ್ಟೋಬರ್ 2012, 19:30 IST

ಹಾವೇರಿ: ದೆಹಲಿಯ ರಾಜಘಾಟ್ ಮಾದರಿಯಲ್ಲಿ ಅಭಿವೃದ್ಧಿಪಡಿಸಿದ ತಾಲ್ಲೂಕಿನ ಕರ್ಜಗಿ ಗ್ರಾಮದ ಗಾಂಧೀಜಿ ಚಿತಾಭಸ್ಮವಿರುವ ಸ್ಮಾರಕದ ಮೇಲೆ ಕುಳಿತ ಭಂಗಿಯಲ್ಲಿರುವ ಮಹಾತ್ಮಾ ಗಾಂಧಿ ಅವರ ಕಂಚಿನ ಪುತ್ಥಳಿ  ಮಂಗಳವಾರ ಅನಾವರಣಗೊಂಡಿತು.

ಪುತ್ಥಳಿಯನ್ನು ಅನಾವರಣಗೊಳಿಸಿದ ಲೋಕೋಪಯೋಗಿ ಸಚಿವ ಸಿ.ಎಂ.ಉದಾಸಿ ಮಾತನಾಡಿ, `ಭಾರತದ ಸ್ವಾತಂತ್ರ್ಯ ಹೋರಾಟವನ್ನು ಸತ್ಯ, ಶಾಂತಿ ಹಾಗೂ ಅಹಿಂಸಾ ಮಾರ್ಗದಲ್ಲಿ ಮುನ್ನಡೆಸಿ, ದೇಶವನ್ನು ಬ್ರಿಟಿಷರ ಸಂಕೋಲೆಗಳಿಂದ ಬಂಧಮುಕ್ತಗೊಳಿಸಿದ ಮಹಾತ್ಮಾಗಾಂಧಿ ಭೌತಿಕವಾಗಿ ನಮ್ಮಂದಿಗೆ ಇಲ್ಲದಿದ್ದರೂ, ಅವರು ಅನುಸರಿಸಿದ ತತ್ವ, ಸಿದ್ದಾಂತಗಳು ನಮ್ಮೆದುರು ಇವೆ. ಪ್ರತಿಯೊಬ್ಬರು ಅವುಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಆದರ್ಶ ಜೀವನ ನಡೆಸಲು ಮುಂದಾಗಬೇಕು; ಎಂದು ಸಲಹೆ ಮಾಡಿದರು.
ಸ್ವಾತಂತ್ರ್ಯ ಪಡೆಯುವ ಸಂದರ್ಭದಲ್ಲಿದ್ದ ನೈತಿಕ ನೆಲೆಗಟ್ಟಿನ ನಾಯಕತ್ವ ಇತ್ತೀಚಿನ ದಿನಗಳಲ್ಲಿ  ಕುಸಿಯುತ್ತಿದೆ ಎಂದು ಅವರು ವಿಷಾದಿಸಿದರು.

ಅಧ್ಯಕ್ಷತೆ ವಹಿಸಿದ್ದ ಶಾಸಕ ನೆಹರೂ ಓಲೇಕಾರ ಮಾತನಾಡಿ, ಸಂಸದರ ನಿಧಿಯಿಂದ 10 ಲಕ್ಷ ರೂಪಾಯಿ ಅನುದಾನ ಹಾಗೂ ಹುತಾತ್ಮ ಮೈಲಾರ ಮಹಾದೇವ ರಾಷ್ಟ್ರೀಯ ಸ್ಮಾರಕ ಟ್ರಸ್ಟ್ ನೀಡಿದ ನಾಲ್ಕು ಲಕ್ಷ ರೂಪಾಯಿ ಅನುದಾನದಲ್ಲಿ ಈ ಸ್ಮಾರಕವನ್ನು ಅಭಿವೃದ್ಧಿಪಡಿಸಲಾಗಿದ್ದು, ಇದರ ಪಾವಿತ್ರ್ಯತೆ ಕಡಿಮೆಯಾಗದಂತೆ ನೋಡಿಕೊಳ್ಳಬೇಕೆಂದು ಗ್ರಾಮಸ್ಥರಲ್ಲಿ ಮನವಿ ಮಾಡಿದರು.

ವಿಧಾನಸಭೆ ಮಾಜಿ ಸಭಾಪತಿ ಬಿ.ಜಿ.ಬಣಕಾರ, ಸಂಸದ ಶಿವಕುಮಾರ ಉದಾಸಿ, ವಿಧಾನ ಪರಿಷತ್ ಸದಸ್ಯರಾದ ಸೋಮಣ್ಣ ಬೇವಿನಮರದ, ಶಿವರಾಜ ಸಜ್ಜನರ, ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮದ ಅಧ್ಯಕ್ಷ ಭೋಜರಾಜ ಕರೂದಿ ಸೇರಿದಂತೆ ಅನೇಕರು ಸಮಾರಂಭದಲ್ಲಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.