ADVERTISEMENT

ಕಲಿವ ಹಕ್ಕು ನನ್ನ ಕೈಗೆ ಕೊಡಿ ಆಂದೋಲನ

​ಪ್ರಜಾವಾಣಿ ವಾರ್ತೆ
Published 21 ಜನವರಿ 2012, 19:30 IST
Last Updated 21 ಜನವರಿ 2012, 19:30 IST

ರಾಯಚೂರು: ಶಿಕ್ಷಣ ನೀಡುವ, ಕಲಿಯುವ, ಪಡೆಯುವ ವಿಧಾನದಲ್ಲಿ ವಿಶೇಷ ತಂತ್ರಗಳ ಕುರಿತು ಹಲವು ವರ್ಷಗಳ ಕಾಲ ಸಂಶೋಧನೆ ಮಾಡಿ ರೂಪಿಸಿದ ತಂತ್ರಗಳನ್ನು 30 ವಿದ್ಯಾರ್ಥಿಗಳ ಮೂಲಕ ಸಾಂಸ್ಕೃತಿಕ ರೂಪದಲ್ಲಿ ಎರಡುವರೆ ತಾಸಿನಲ್ಲಿ ಪ್ರದರ್ಶನ ನೀಡುವ ಮಂಗಳೂರಿನ ಸ್ವರೂಪ ಅಧ್ಯಯನ ಕೇಂದ್ರದ `ಕಲಿವ ಹಕ್ಕು ನನ್ನ ಕೈಗೆ ಕೊಡಿ~ ಶಿಕ್ಷಣ ಜಾಗೃತಿ ಆಂದೋಲನವು ಶನಿವಾರ ಇಲ್ಲಿನ ಟ್ಯಾಗೋರ ಸಭಾಭವನದಲ್ಲಿ ಆರಂಭಗೊಡಿತು.

ಕ್ಷೇತ್ರ ಶಿಕ್ಷಣಾಧಿಕಾರಿ ಮಲ್ಲಿಕಾರ್ಜುನ  ಇದನ್ನು ಉದ್ಘಾಟಿಸಿ ಮಾತನಾಡಿ ಕಲಿಕೆ ವಿಧಾನಗಳಲ್ಲಿ ಸಾಕಷ್ಟು ಬದಲಾವಣೆ ಆಗುತ್ತಿವೆ. ಸ್ವರೂಪ ಅಧ್ಯಯನ ಕೇಂದ್ರದ ಮುಖ್ಯಸ್ಥ ಗೋಪಾಡ್ಕರ್ ಅವರ ಸಂಶೋಧನೆಯನ್ನು ಆಧರಿಸಿದ ಕಲಿಕೆ ವಿಧಾನ ಮಕ್ಕಳ ಕಲಿಕೆಗೆ ಸಹಕಾರಿಯಾಗಿದೆ ಎಂದು ತಿಳಿಸಿದರು.

ಗೋಪಾಡ್ಕರ್ ಸಂಶೋಧನೆ ಮತ್ತು ಮಾರ್ಗದರ್ಶನ ಶಿಕ್ಷಣ ವಿಧಾನದ ಪರ್ಯಾಯ ಚಿಂತನೆ, ಪರಿಕಲ್ಪನೆ ಕುರಿತ ಪ್ರದರ್ಶನವನ್ನು ಸ್ವರೂಪ ಅಧ್ಯಯನ ಕೇಂದ್ರ ತಂಡದ ವಿದ್ಯಾರ್ಥಿ-ವಿದ್ಯಾರ್ಥಿನಿಯರು ಜನರ ಮುಂದಿಟ್ಟರು.

ಯುನಿಸೆಫ್ ಘಟಕದ ಸಂಯೋಜನಾಧಿಕಾರಿ ರಾಘವೇಂದ್ರ ಭಟ್ ಮಾತನಾಡಿ, ಗೋಪಾಡ್ಕರ್ ಅವರು ಸತತ 20 ವರ್ಷಗಳ ಕಾಲ ಅಧ್ಯಯನ ಮತ್ತು ಸಂಶೋಧನೆ ಮೂಲಕ ಮಕ್ಕಳ ಕಲಿಕೆಗೆ ಉಪಯುಕ್ತವಾದ ಶಿಕ್ಷಣ ಸರಳ ಕಲಿಕಾ ವಿಧಾನ ಗುರುತಿಸಿದ್ದಾರೆ.
 
ಶಿಕ್ಷಣ ಜಾಗೃತಿ ಆಂದೋಲನದ ಮೂಲಕ ನಗರಕ್ಕೆ ಬಂದಿರುವ ಈ ತಂಡವು ಭಾನುವಾರವೂ (ಜ.22) ಟ್ಯಾಗೋರ ಶಿಕ್ಷಣ ಸಂಸ್ಥೆ ಸಭಾಭವನದಲ್ಲಿ ಕಲಿಕೆ ವಿಧಾನಗಳ ಬಗ್ಗೆ ಪ್ರದರ್ಶನ ನೀಡಲಿದೆ ಎಂದು ವಿವರಿಸಿದರು. ಗ್ರಾಮ ವಿಕಾಸ ಸಂಸ್ಥೆಯ ಅಧ್ಯಕ್ಷ ಹಫೀಜುಲ್ಲಾ ಇತರರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.