ADVERTISEMENT

ಕಲ್ಲಂಗಡಿ ಹಣ್ಣುಗಳಿಗೆ ಭಾರಿ ಬೇಡಿಕೆ

​ಪ್ರಜಾವಾಣಿ ವಾರ್ತೆ
Published 6 ಮಾರ್ಚ್ 2011, 18:30 IST
Last Updated 6 ಮಾರ್ಚ್ 2011, 18:30 IST
ಕಲ್ಲಂಗಡಿ ಹಣ್ಣುಗಳಿಗೆ ಭಾರಿ ಬೇಡಿಕೆ
ಕಲ್ಲಂಗಡಿ ಹಣ್ಣುಗಳಿಗೆ ಭಾರಿ ಬೇಡಿಕೆ   

ಶಿಡ್ಲಘಟ್ಟ: ಬೇಸಿಗೆ ಸಮೀಪಿಸುತ್ತಿದ್ದಂತೆ ಬಿಸಿಲಿನ ಝಳವು ಏರುತ್ತಿದೆ. ಕಲ್ಲಂಗಡಿ ಹಣ್ಣುಗಳಿಗೆ ಭಾರಿ ಬೇಡಿಕೆ ಕುದುರುತ್ತಿದೆ. ಪಟ್ಟಣದ ಅಮ್ಮನಕೆರೆ ಪ್ರದೇಶ ಸೇರಿದಂತೆ ಪ್ರಮುಖ ಸ್ಥಳಗಳಲ್ಲಿ ಕಲ್ಲಂಗಡಿ ಹಣ್ಣುಗಳ ಭರ್ಜರಿ ವ್ಯಾಪಾರ ನಡೆಯುತ್ತಿದೆ.ಆಂಧ್ರ ಪ್ರದೇಶದ ನಾಮಧಾರಿ ಕಲ್ಲಂಗಡಿ ಹಣ್ಣುಗಳನ್ನು ರಸ್ತೆಯಲ್ಲಿ ಹಾದುಹೋಗುವವರೆಲ್ಲ ಸವಿದು, ಬಿಸಿಲಿನಲ್ಲಿ ಬಳಲಿದವರು ಹೊಟ್ಟೆ ತಂಪು ಮಾಡಿಕೊಳ್ಳುತ್ತಿದ್ದಾರೆ. ಹಣ್ಣು ಜತೆಗೆ ಕೊಂಚ ಉಪ್ಪು, ಮೆಣಸು ಬೆರೆಸಿಕೊಡುತ್ತಿರುವುದರಿಂದ ನಾಲಿಗೆಗೂ ರುಚಿ ಹತ್ತಿಸುತ್ತಿದೆ.

ಮೂಲತಃ ಮಧ್ಯ ಆಫ್ರಿಕಾದ ಕಲ್ಲಂಗಡಿ ಹಣ್ಣುಗಳು ವಿವಿಧ ಜಾತಿಗೆ ಸೇರಿವೆ.  ಈಜಿಪ್ಟ್ ದೇಶದ ನಾಲ್ಕನೇ ರಾಜಮನೆತನದ ಕಾಲದಲ್ಲಿ ಕಲ್ಲಂಗಡಿ ಹಣ್ಣುಗಳ ಕೃಷಿ ನಡೆಯುತ್ತಿತ್ತು. ಮೊಘಲರ ಆಳ್ವಿಕೆಯಲ್ಲಿ ಕಲ್ಲಂಗಡಿ ಭಾರತಕ್ಕೆ ಪರಿಚಿತವಾಯಿತು. ನದಿಯ ಮರಳು ದಡಗಳಲ್ಲಿ ಸೊಂಪಾಗಿ ಬೆಳೆಯುವ ಈ ಹಣ್ಣುಗಳ ಉಲ್ಲೇಖ ಮೊಗಲ್‌ರ ಮೇರುಕೃತಿಯಾದ ಜಹಾಂಗೀರ್ ನಾಮಾದಲ್ಲೂ ಇದೆ ಎನ್ನುವುದು ಇತಿಹಾಸಕಾರರ ಅಭಿಪ್ರಾಯ.

‘ನಮ್ಮ ಜಿಲ್ಲೆಯಲ್ಲೂ ಹೆಚ್ಚಾಗಿ ಕಲ್ಲಂಗಡಿ ಹಣ್ಣು ಬೆಳೆಯುತ್ತಿದ್ದರು. ಆದರೆ ನೀರಿನ ಅಭಾವದಿಂದ ಈಗ ಕಡಿಮೆಯಾಗಿದೆ. ಅದಕ್ಕಾಗಿ ಆಂಧ್ರಪ್ರದೇಶದಿಂದ ಹಣ್ಣುಗಳನ್ನು ತರುತ್ತೇವೆ. ಕೃತಕ ತಂಪು ಪಾನೀಯ ಕುಡಿಯುವುದಕ್ಕಿಂತ ಇಂಥ ಹಣ್ಣುಗಳನ್ನು ತಿನ್ನುವುದು ಉತ್ತಮವೆಂದು ಜನರು ಭಾವಿಸುತ್ತಾರೆ. ಹೀಗಾಗಿ ಕಲ್ಲಂಡಿ ಹಣ್ಣಿಗೆ ಭಾರಿ ಬೇಡಿಕೆಯಿದೆ’ ಎಂದು ಹಣ್ಣಿನ ವ್ಯಾಪಾರಿ ಮಂಜುನಾಥ್ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.