ADVERTISEMENT

ಕಷ್ಟಪಟ್ಟು ಸುಖಪಟ್ಟೀತಲೇ ಪರಾಕ್...

​ಪ್ರಜಾವಾಣಿ ವಾರ್ತೆ
Published 9 ಫೆಬ್ರುವರಿ 2012, 19:30 IST
Last Updated 9 ಫೆಬ್ರುವರಿ 2012, 19:30 IST

ಹೂವಿನಹಡಗಲಿ (ಬಳ್ಳಾರಿ ಜಿಲ್ಲೆ): `ಮುತ್ತಿನ ರಾಶಿ, ಕಷ್ಟಪಟ್ಟು ಸುಖಪಟ್ಟೀತಲೇ ಪರಾಕ್....~ ವರ್ಷದ ಭವಿಷ್ಯವಾಣಿ ಎಂದೇ ಕರೆಯಲಾಗುವ ಕಾರ್ಣಿಕದ ನುಡಿ– ಇದು. ಉತ್ತರ ಕರ್ನಾಟಕ ಭಾಗದ ಸುಪ್ರಸಿದ್ಧ ಜಾತ್ರೆಗಳಲ್ಲಿ ಒಂದಾದ ಹೂವಿನಹಡಗಲಿ ತಾಲ್ಲೂಕಿನ ಮೈಲಾರ ಗ್ರಾಮದ ಮೈಲಾರಲಿಂಗೇಶ್ವರನ ಜಾತ್ರೆಯ ಕಾರ್ಣಿಕೋತ್ಸವದಲ್ಲಿ ಗೊರವಪ್ಪ ಗುರುವಾರ ಸಂಜೆ ಡೆಂಕನಮರಡಿ ಮೈದಾನದಲ್ಲಿ ನೆರದಿದ್ದ ಲಕ್ಷಾಂತರ ಜನರೆದುರು ವರ್ಷದ ಭವಿಷ್ಯವಾಣಿ ಹೇಳಿದರು.

ಗೊರವಪ್ಪ ಬಿಲ್ಲನ್ನೇರುತಿದ್ದಂತೆಯೇ ಜನರ ಹರ್ಷೋದ್ಘಾರ ಮುಗಿಲು ಮು•ಟ್ಟಿತ್ತು. ಗೊರವಪ್ಪ “ಮುತ್ತಿನ ರಾಶಿ ಕಷ್ಟಪಟ್ಟು ಸುಖಪಟ್ಟೀತಲೇ ಪರಾಕ್....ಎಂಬ ಕಾರ್ಣಿಕ ನುಡಿದ ಕೂಡಲೇ ನೆರದಿದ್ದ ಭಕ್ತರು ತಮ್ಮದೇ ಆದ ರೀತಿಯಲ್ಲಿ ಕಾರ್ಣಿಕ ನುಡಿಯ ಒಳಿತು, ಕೆಡುಕುಗಳನ್ನು ಲೆಕ್ಕಾಚಾರ ಹಾಕುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.
ಕಾರ್ಣಿಕ ನುಡಿಯ ಬಗ್ಗೆ ಜನರಲ್ಲಿ ಸಂತಸದ ಹೊಳೆ ಹರಿಯಿತು.

ಒಳ್ಳೆಯ ಮಳೆ ಬರುತ್ತದೆ, ಚೆನ್ನಾಗಿ ಬೆಳೆ ಬರುತ್ತದೆ ಎಂಬ ನುಡಿಗಳು ಕೇಳಿ ಬರುತ್ತಿದ್ದವು. ಬಹು ವರ್ಷಗಳ ನಂತರ ಇಂತಹ ಒಳ್ಳೆಯ ಕಾರ್ಣಿಕ ನುಡಿ ಕೇಳಿ ಬಂದಿದೆ ಎನ್ನುವುದು ಭಕ್ತರ ಅಭಿಪ್ರಾಯವಾಗಿತ್ತು. ನೆರೆದ ಭಕ್ತರು ಇಂತಹ ಕಾರ್ಣಿಕ ನುಡಿಯನ್ನು ಕೇಳಿ ಸಮಾಧಾನದ ನಿಟ್ಟುಸಿರು ಬಿಟ್ಟರು. ಕಾರ್ಣಿಕ ಕೇಳಲು ರಾಜ್ಯದ ಬೀದರ್, ಗುಲ್ಬರ್ಗ, ವಿಜಾಪುರ, ಗದಗ, ಕೊಪ್ಪಳ, ದಾವಣಗೆರೆ, ರಾಯಚೂರು, ಹಾವೇರಿ, ಬೆಳಗಾವಿ, ಹುಬ್ಬಳ್ಳಿ-ಧಾರವಾಡ, ಬಳ್ಳಾರಿ ಮೊದಲಾದ ಜಿಲ್ಲೆಗಳು ಮಾತ್ರವಲ್ಲದೆ, ನೆರೆಯ ರಾಜ್ಯಳಿಂದಲೂ ಭಾರಿ ಸಂಖ್ಯೆಯಲ್ಲಿ ಭಕ್ತ ಸಮೂಹ ಮೈಲಾರಕ್ಕೆ ಆಗಮಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.