ADVERTISEMENT

ಕಾಂಗ್ರೆಸ್‌ನಲ್ಲಿ ಸಾಮೂಹಿಕ ನಾಯಕತ್ವ ಅಗತ್ಯ

​ಪ್ರಜಾವಾಣಿ ವಾರ್ತೆ
Published 5 ಅಕ್ಟೋಬರ್ 2012, 19:30 IST
Last Updated 5 ಅಕ್ಟೋಬರ್ 2012, 19:30 IST

ಗಂಗಾವತಿ: ಒಂದೊಮ್ಮೆ ಕಾಂಗ್ರೆಸ್ ಪಕ್ಷದಲ್ಲಿ ತತ್ವ, ಸಿದ್ದಾಂತ, ವ್ಯಕ್ತಿತ್ವಗಳಿಗೆ ಅಪಾರ ಬೆಲೆ ಇತ್ತು. ಆದರೆ ಇಂದು ಪಕ್ಷದಲ್ಲಿ ಮೌಲ್ಯಗಳಿಗೆ ಬೆಲೆ ಇಲ್ಲದಂತಾಗಿದೆ. ಪಕ್ಷದಲ್ಲಿ ಶಿಸ್ತಿಲ್ಲ. ಇದು ಹೀಗೆ ಮುಂದುವರೆದರೆ ಪಕ್ಷಕ್ಕೆ ಭವಿಷ್ಯವಿಲ್ಲ ಎಂದು ಮಾಜಿ ಸಚಿವ ಯಾದವರಾವ್ ಎಚ್ಚರಿಕೆ ನೀಡಿದರು.

ನಗರದ ಖಾಸಗಿ ಹೊಟೇಲ್ ಒಂದರಲ್ಲಿ ಶುಕ್ರವಾರ ಕಾಂಗ್ರೆಸ್ ಪಕ್ಷದಿಂದ ಆಯೋಜಿಸಲಾಗಿದ್ದ ~ಕಾಂಗ್ರೆಸ್ಸಿಗೆ ಬನ್ನಿ, ಬದಲಾವಣೆ ತನ್ನಿ~ ಕಾರ್ಯಕ್ರಮದ ಅಂಗವಾಗಿ ನಡೆದ ಕಾರ್ಯಕರ್ತರ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.

ಇನ್ನೇನು ಚುನಾವಣೆ ತೀರ ಹತ್ತಿರದಲ್ಲಿವೆ. ಇಂತಹ ಸಂದರ್ಭದಲ್ಲಿ ಸಾಮೂಹಿಕ ನಾಯಕತ್ವದಡಿ ಪಕ್ಷದಲ್ಲಿ ಮೊದಲು ಶಿಸ್ತು ಬೆಳೆಸಬೇಕಿದೆ. ಶಿಸ್ತಿಲ್ಲದಿದ್ದರೆ ಪಕ್ಷಕ್ಕೆ ಹಿನ್ನೆಡೆಯಾಗಲಿದೆ. ಬಿಜೆಪಿ ಸರ್ಕಾರದ ಬದಲಾವಣೆಗಾಗಿ ಕಾಂಗ್ರೆಸ್ಸಿಗೆ ಬನ್ನಿ ಬದಲಾವಣೆ ತನ್ನಿ ಎಂದು ಪಕ್ಷ ಕರೆ ನೀಡಿದೆ ಎಂದರು.

ಮಾಜಿ ಎಂಎಲ್‌ಸಿ ಎಚ್.ಆರ್. ಶ್ರೀನಾಥ ಮಾತನಾಡಿ, ವಿದ್ಯುತ್ ಕೇಳಲು ಮನೆವರೆಗೆ ಹೋದ ರೈತರೊಂದಿಗೆ ಇತ್ತೀಚೆಗೆ ಸಂಸದ ಶಿವರಾಮಗೌಡ ನಡೆದುಕೊಂಡ ರೀತಿ ನೀಚತನದಿಂದ ಕೂಡಿದೆ. ಇದು ಬಿಜೆಪಿಯ ಸಂಸ್ಕೃತಿಯನ್ನು ತೋರಿಸಿಕೊಡುತ್ತದೆ.

ಚುನಾಯಿತನಾದವನು ಸಾರ್ವಜನಿಕರ ಕೆಲಸ ಕಾರ್ಯಗಳನ್ನು ಮಾಡಿಕೊಡಲಾಗದಿದ್ದಲ್ಲಿ ತನ್ನ ಸ್ಥಾನಕ್ಕೆ ರಾಜೀನಾಮೆ ನೀಡಿ ಕುರ್ಚಿಯಿಂದ ನಿರ್ಗಮಿಸಬೇಕೇ ಹೊರತು ಅನ್ನ ನೀಡುವ ರೈತರನ್ನು ಅವಮಾನಿಸಬಾರದು ಎಂದು ಸಂಸದರ ಕೃತ್ಯ ಖಂಡಿಸಿದರು.

ಮಾಜಿ ಸಚಿವ ಮಲ್ಲಿಕಾರ್ಜುನ ನಾಗಪ್ಪ ಮಾತನಾಡಿ, ಇದೇ ಅ.10ರಂದು ನಗರದ 31 ವಾರ್ಡಿನ ಜನರನ್ನು ಸೇರಿಸಿ ಸಮಾವೇಶ ನಡೆಸಲಾಗುವುದು. ಇಡೀ ಜಿಲ್ಲೆಯಾದ್ಯಂತ ಕಾಂಗ್ರೆಸ್ಸನ್ನು ಮತ್ತೆ ಬಲಿಷ್ಠವಾಗಿ ಸಂಘಟಿಸುವ ಕಾರ್ಯ ಮಾಡಲಾಗುತ್ತಿದೆ ಎಂದರು.

ಸಭೆಯಲ್ಲಿ ಪ್ರಮುಖರಾದ ವಿ. ದುರುಗಪ್ಪ, ಹನುಮಂತಪ್ಪ ನಾಯಕ, ವೀರಭದ್ರಪ್ಪ, ಬಸವರಾಜ ಸ್ವಾಮಿ ಮಳೆಮಠ, ರಾಜಶೇಖರಪ್ಪ, ಅನ್ನಪೂರ್ಣಸಿಂಗ್, ಶೈಲಜಾ ರಮೇಶ, ಸುನಿತಾ, ವಿಜಯಲಕ್ಷ್ಮಿ, ಖೈರವಾಡಗಿ ದೇವಪ್ಪ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.