ADVERTISEMENT

ಕಾಂಗ್ರೆಸ್‌ನಿಂದ ದಿಢೀರ್ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 19 ಸೆಪ್ಟೆಂಬರ್ 2011, 19:30 IST
Last Updated 19 ಸೆಪ್ಟೆಂಬರ್ 2011, 19:30 IST

ಕೊಪ್ಪಳ: ಹಣ ನೀಡುವ ಮೂಲಕ ಬಿಜೆಪಿ ಕಾರ್ಯಕರ್ತರು ಮತದಾರರ ಗುರುತಿನ ಚೀಟಿಗಳನ್ನು ಸಂಗ್ರಹಿಸುವ ಕಾರ್ಯದಲ್ಲಿ ತೊಡಗಿದ್ದಾರೆ ಎಂದು ಆರೋಪಿಸಿ ಕಾಂಗ್ರೆಸ್ ಕಾರ್ಯಕರ್ತರು ನಗರದಲ್ಲಿ ಸೋಮವಾರ ದಿಢೀರ್ ಪ್ರತಿಭಟನೆ ನಡೆಸಿದರು.

ನಗರದ ಅಶೋಕ ವೃತ್ತದಲ್ಲಿ ಪ್ರತಿಭಟನೆ ನಡೆಸಿದ ಕಾರ್ಯಕರ್ತರು ಬಿಜೆಪಿ ವಿರುದ್ಧ ಘೋಷಣೆಗಳನ್ನು ಕೂಗಿದರಲ್ಲದೇ, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಪ್ರದೇಶ ಕಾಂಗ್ರೆಸ್ ಸಮಿತಿ ಕಾರ್ಯದರ್ಶಿ (ಕೆಪಿಸಿಸಿ) ರಾಜಶೇಖರ ಮೆಣಸಿನಕಾಯಿ ಮಾತನಾಡಿ, ನಗರದ ಹಮಾಲರ ಸಂಘದ ಕಾಲೋನಿಯಲ್ಲಿ ಮತ ಯಾಚನೆಗಾಗಿ ಇಂದು ಪಕ್ಷದ ಹಿರಿಯ ಮುಖಂಡರಾದ ಕೇಂದ್ರ ಸಚಿವ ಮಲ್ಲಿಕಾರ್ಜುನ ಖರ್ಗೆ, ಮಾಜಿ ಸಚಿವ ಇಕ್ಬಾಲ್ ಅನ್ಸಾರಿ ಮತ್ತಿತರರು ತೆರಳಿದಾಗ ಸ್ವತಃ ಅಲ್ಲಿನ ನಿವಾಸಿಗಳೇ ಈ ವಿಷಯವನ್ನು ಮುಖಂಡರಿಗೆ ತಿಳಿಸಿದ್ದಾರೆ ಎಂದರು.

ಆಧಾರ್ ಕಾರ್ಡ್ ಮಾಡಿಸಿ ಕೊಡುವುದಾಗಿ ಹೇಳಿ ನಮ್ಮ ಗುರುತಿನ ಚೀಟಿಗಳನ್ನು ಬಿಜೆಪಿ ಕಾರ್ಯಕರ್ತರು ಪಡೆದಿದ್ದಾರೆ. ಇದಕ್ಕೆ ಪ್ರತಿಯಾಗಿ ಪ್ರತಿಯೊಬ್ಬರಿಗೂ 500 ರೂಪಾಯಿ ಹಂಚಿಸಿದ್ದಾರೆ ಎಂದು ನಿವಾಸಿಗಳು ದೂರಿದ್ದಾರೆ. ಈ ಹಿನ್ನೆಲೆಯಲ್ಲಿ ಚುನಾವಣಾ ಅಕ್ರಮ ಎಂಬುದಾಗಿ ಪರಿಗಣಿಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಸಾಂಕೇತಿಕವಾಗಿ ಈ ಪ್ರತಿಭಟನೆ ನಡೆಸುತ್ತಿರುವುದಾಗಿ ಹೇಳಿದರು.

ಈಗಾಗಲೇ ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಫ್ಯಾಕ್ಸ್ ಮೂಲಕ ರಾಜ್ಯ ಚುನಾವಣಾ ಆಯೋಗಕ್ಕೆ ಈ ಸಂಬಂಧ ದೂರು ಸಲ್ಲಿಸಿದ್ದಾರೆ ಎಂದೂ ಹೇಳಿದರು.

ಕೆಪಿಸಿಸಿ ಕಾರ್ಯದರ್ಶಿ ಅನ್ವರ್ ಮುಧೋಳ, ಜಿಲ್ಲಾ ಪಂಚಾಯಿತಿ ಸದಸ್ಯ ಮಲ್ಲೇಶಪ್ಪ ಗುಮಗೇರಿ,  ಸಂಗಮೇಶ ಬಾದವಾಡಗಿ, ಸೈಯದ್ ಹಾಜಿ ಮತ್ತಿತರರು ಪ್ರತಿಭಟನೆಯ ನೇತೃತ್ವ ವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.