ADVERTISEMENT

ಕಾಂಗ್ರೆಸ್ ಪಾದಯಾತ್ರೆಗೆ ಅಡ್ಡಿ: ಒಬ್ಬನ ಬಂಧನ

​ಪ್ರಜಾವಾಣಿ ವಾರ್ತೆ
Published 10 ಮಾರ್ಚ್ 2012, 19:30 IST
Last Updated 10 ಮಾರ್ಚ್ 2012, 19:30 IST
ಕಾಂಗ್ರೆಸ್ ಪಾದಯಾತ್ರೆಗೆ ಅಡ್ಡಿ: ಒಬ್ಬನ ಬಂಧನ
ಕಾಂಗ್ರೆಸ್ ಪಾದಯಾತ್ರೆಗೆ ಅಡ್ಡಿ: ಒಬ್ಬನ ಬಂಧನ   

ಬಳ್ಳಾರಿ: ನಗರದಲ್ಲಿ ಮೂಲಸೌಲಭ್ಯಗಳಿಗೆ ಆಗ್ರಹಿಸಿ ಕಾಂಗ್ರೆಸ್ ಮುಖಂಡರು  ಶನಿವಾರ ನಡೆಸುತ್ತಿದ್ದ ಪಾದಯಾತ್ರೆಯ ವೇಳೆ ಅಡ್ಡಿಪಡಿಸಿದ ಶಾಸಕ ಜಿ.ಸೋಮಶೇಖರ ರೆಡ್ಡಿ ಅವರ ಆಪ್ತ ಸಹಾಯಕ ರಾಮ್‌ಬಾಬು ಅವರನ್ನು ಪೊಲೀಸರು ಬಂಧಿಸಿ ನಂತರ ಬಿಡುಗಡೆ ಮಾಡಿದರು.

ಕಾಂಗ್ರೆಸ್ ಪಕ್ಷದ ನಗರ ಜಿಲ್ಲಾ ಘಟಕದ ಕಾರ್ಯಕರ್ತರು ಇದೇ 3ರಿಂದ ನಗರದ ವಿವಿಧ ವಾರ್ಡ್‌ಗಳಲ್ಲಿ  ಹಮ್ಮಿಕೊಂಡಿರುವ ಪಾದಯಾತ್ರೆಯ ಅಂಗವಾಗಿ, ಶನಿವಾರ ಬೆಳಿಗ್ಗೆ 32ನೇ ವಾರ್ಡ್ ವ್ಯಾಪ್ತಿಯ ಕೋಟೆ ಪ್ರದೇಶದಲ್ಲಿ ಪಾದಯಾತ್ರೆ ನಡೆಸುತ್ತಿದ್ದ ವೇಳೆ ಶಾಸಕ ಸೋಮಶೇಖರ ರೆಡ್ಡಿ ಅವರ ಆಪ್ತ ಸಹಾಯಕ ಪಿ.ರಾಮ್‌ಬಾಬು ಮಧ್ಯಪ್ರವೇಶಿಸಿ, ಕಾರ್ಯಕರ್ತನೊಬ್ಬನನ್ನು ಆಟೊದಿಂದ ಹೊರಗೆ ಎಳೆದು ಥಳಿಸಿ ಮೈಕ್ ಕಸಿದು ಪ್ರಚಾರ ನಡೆಸದಂತೆ ಬೆದರಿಸಿದರು.

ಇದನ್ನು ವಿರೋಧಿಸಿದ ಕಾರ್ಯಕರ್ತರು ಪ್ರತಿಭಟನೆ ನಡೆಸಿದರಲ್ಲದೆ, ಕೌಲ್‌ಬಝಾರ್ ಪೊಲೀಸ್ ಠಾಣೆಗೆ ದೂರು ನೀಡಿದ್ದರಿಂದ ಹಲ್ಲೆ ಆರೋಪದಲ್ಲಿ ಬಂಧಿಸಿ, ನಂತರ ಬಿಡುಗಡೆ ಮಾಡಲಾಯಿತು.  ಜನರ ಮೂಲ  ಸಮಸ್ಯೆಗಳ ಪಟ್ಟಿ ಮಾಡಿಕೊಂಡು, ಸರ್ಕಾರಕ್ಕೆ ಸಲ್ಲಿಸುವ ಕಾರ್ಯಕ್ರಮ ಹಾಕಿಕೊಂಡಿರುವ ಕಾಂಗ್ರೆಸ್ ನಿಯೋಗದಲ್ಲಿ ಅಧ್ಯಕ್ಷ ಜೆ.ಎಸ್. ಆಂಜನೇಯುಲು, ವಿ.ಕೆ. ಬಸಪ್ಪ, ಅರ್ಜುನ್, ಕಮಲಾ ಮರಿಸ್ವಾಮಿ, ಧನಂಜಯ, ಮತ್ತಿತರರು ಉಪಸ್ಥಿತರಿದ್ದರು.
 
ಘಟನೆಗೆ ಸಂಬಂಧಿಸಿದಂತೆ ದೂರು ಪಡೆದರೂ,  ಕಾಂಗ್ರೆಸ್ ಮುಖಂಡರು ಆರೋಪಿಸಿದ್ದಾರೆ. ಘಟನೆಯ ಸಂಬಂಧದೂರು ಸ್ವೀಕರಿಸಿ, ಹಲ್ಲೆ ನಡೆಸಿದವರನ್ನು ಬಂಧಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಚಂದ್ರಗುಪ್ತ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.