ADVERTISEMENT

ಕಾಡಾನೆ ದಾಳಿ: ಶಾಶ್ವತ ಪರಿಹಾರಕ್ಕೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 6 ಜೂನ್ 2011, 19:30 IST
Last Updated 6 ಜೂನ್ 2011, 19:30 IST

ಮೂಡಿಗೆರೆ: ತಾಲ್ಲೂಕಿನ ಕೆಂಜಿಗೆ, ಬಾಳೇಹಳ್ಳಿ, ಕುಂದೂರು, ಸಾರಗೊಡು, ತಳವಾರ, ಬೈರಾಪುರ, ನಿಡುವಾಳೆ, ತರುವೆ, ಗುತ್ತಿ, ಕೋಗಿಲೆ, ಬಾಳೂರು ಮುಂತಾದೆಡೆ ಕಾಡಾನೆ ದಾಳಿಯಿಂದ ಲಕ್ಷಾಂತರ ಬೆಲೆಯ ಕಾಫಿ, ಏಲಕ್ಕಿ, ಮೆಣಸು, ಅಡಿಕೆ, ಬಾಳೆ ಬೆಳೆ ಹಾನಿಯಾಗಿದ್ದು, ಕಾಡಾನೆ ದಾಳಿಗೆ ಶಾಶ್ವತ ಪರಿಹಾರ ಕಂಡುಕೊಳ್ಳುವಂತೆ ರೈತರು, ತಾಲ್ಲೂಕಿನ ವಿವಿಧ ಸಂಘಟನೆಗಳ ಮುಖಂಡರು, ತಾಲ್ಲೂಕು ಅರಣ್ಯ ಇಲಾಖೆ ಕಚೇರಿ ಎದುರು ಸೋಮವಾರ ಪ್ರತಿಭಟಿಸಿದರು.

ರೈತ ಸಂಘದ ಜಿಲ್ಲಾ ಅಧ್ಯಕ್ಷ ಡಿ.ಆರ್.ದುಗ್ಗಪ್ಪ ಗೌಡ ಮಾತನಾಡಿ, ಬೆಳೆ ನಷ್ಟ ಪರಿಹಾರ ನೀಡಬೇಕು. ಕಾಡಾನೆ ಸ್ಥಳಾಂತರಕ್ಕೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ತಾಲ್ಲೂಕಿನಲ್ಲಿ ಕಾಡಾನೆ ದಾಳಿಗೆ ಬೆಳೆ ನಷ್ಟ, ಜೀವಹಾನಿಯಾಗಿದೆ ಎಂದು ಬಿಜೆಪಿ ರಾಜ್ಯ ಕಾರ್ಯಕಾರಣಿ ಸದಸ್ಯ ಕೆಂಜಿಗೆ ಕೇಶವ ದೂರಿದರು.

ಅರಣ್ಯ ಇಲಾಖೆ  ಸ್ಪಂದಿಸದಿದ್ದರೆ ಉಗ್ರ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.
ಎಪಿಎಂಸಿ ಅಧ್ಯಕ್ಷ ಬಾಳೇಹಳ್ಳಿ ಸತೀಶ್, ರೈತ ಸಂಘದ ದಯಾಕರ್, ಜಗದೀಶ್, ನಾರಾಯಣ ಗೌಡ, ರಮೇಶ್ ಇದ್ದರು.

ಪ್ರತಿಭಟನೆಗೆ ಸ್ಪಂದಿಸಿದ ಎಸಿಎಫ್‌ಓ ಶ್ರೀನಿವಾಸ್ ರೆಡ್ಡಿ , ಕಾಡಾನೆ ಓಡಿಸಲು ಐಬೆಕ್ಸ್ ತಂತಿ ಬೇಲಿ, ಆನೆಕಂದಕ ನಿರ್ಮಾಣಕ್ಕೆ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ. ತಾಲ್ಲೂಕಿನಲ್ಲಿ 2010-11ನೇ ಸಾಲಿನಲ್ಲಿ 736 ಆನೆ ದಾಳಿ ಪ್ರಕರಣಗಳಲ್ಲಿ 29ಲಕ್ಷ ಪರಿಹಾರ ನೀಡಲಾಗಿದೆ. 300ಕ್ಕೂ ಹೆಚ್ಚಿನ ಪ್ರಕರಣಗಳಿಗೆ ಪರಿಹಾರ ನೀಡಲು ಸರ್ಕಾರಕ್ಕೆ ವರದಿ ನೀಡಲಾಗಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.