ADVERTISEMENT

ಕಾರ್ಮಿಕ ದೇಶದ ಬೆನ್ನೆಲುಬು

​ಪ್ರಜಾವಾಣಿ ವಾರ್ತೆ
Published 13 ಫೆಬ್ರುವರಿ 2011, 19:30 IST
Last Updated 13 ಫೆಬ್ರುವರಿ 2011, 19:30 IST
ಕಾರ್ಮಿಕ ದೇಶದ ಬೆನ್ನೆಲುಬು
ಕಾರ್ಮಿಕ ದೇಶದ ಬೆನ್ನೆಲುಬು   

ಶಿವಮೊಗ್ಗ: ಕಾರ್ಮಿಕರ ವಿರೋಧಿ ನೀತಿ ಅನುಸರಿಸುವ ಯಾವ ಪ್ರಭುತ್ವವೂ ಉತ್ತಮ ಆಡಳಿತ ಕೊಡಲು ಸಾಧ್ಯವಿಲ್ಲ ಎಂದು ಸಿಐಟಿಯು ರಾಜ್ಯ ಕಾರ್ಯದರ್ಶಿ ಮಹಂತೇಶ್ ಅಭಿಪ್ರಾಯಪಟ್ಟರು.ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ ಭಾನುವಾರ ನಗರದಲ್ಲಿ ಹಮ್ಮಿಕೊಂಡಿದ್ದ ಜಿಲ್ಲಾ ಕಾರ್ಮಿಕರ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.

ಈಜಿಪ್ಟ್ ಅಧ್ಯಕ್ಷ ಮುಬಾರಕ್ ಕಾರ್ಮಿಕ ವಿರೋಧಿ ನೀತಿ ಅನುಸರಿಸಿದ್ದರಿಂದಲೇ ಅವರ ಪದಚ್ಯುತಿಯಾಗಬೇಕಾಯಿತು. ಕಾರ್ಮಿಕ ದೇಶದ ಬೆನ್ನೆಲುಬು. ಆತನ ಜೀವನದ ಹಕ್ಕನ್ನು ರಕ್ಷಿಸದ ಯಾವ ಸರ್ಕಾರಗಳೂ ಅಧಿಕಾರದಲ್ಲಿರಲು ಅರ್ಹವಲ್ಲ ಎಂದರು.

ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಕಾರ್ಮಿಕ ನೀತಿ ವಿರೋಧಿಸಿ ಫೆ. 23ರಂದು ಬೆಂಗಳೂರಿನಲ್ಲಿ ಬೃಹತ್ ರ್ಯಾಲಿ ಹಮ್ಮಿಕೊಳ್ಳಲಾಗಿದೆ. ಇದು ಕೇವಲ ಕಾರ್ಮಿಕರ ಚಳವಳಿ ಅಲ್ಲ, ಜನವಿರೋಧಿ ನೀತಿಗಳ ವಿರುದ್ಧ ನಡೆಯುವ ಚಳವಳಿ ಎಂದರು.

ಚಿಲ್ಲರೆ ಮಾರಾಟಕ್ಕೆ ವಿದೇಶಿ ಬಂಡವಾಳ ನೇರವಾಗಿ ಹರಿದು ಬರುತ್ತಿರುವುದರಿಂದ ಅಗತ್ಯ ವಸ್ತುಗಳ ಬೆಲೆ ಗಗನಕ್ಕೆ ಏರಿದೆ. ತೈಲ ಉತ್ಪನ್ನಗಳ ಬೆಲೆ ಕೇವಲ ಒಂದು ವರ್ಷದಲ್ಲಿ 6 ಬಾರಿ ಏರಿಕೆ ಆಗಿದೆ. ತೆರಿಗೆ ಕಡಿಮೆ ಮಾಡದ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಜನರ ಮೇಲೆ ಹೊರೆ ಹಾಕಿವೆ ಎಂದು ದೂರಿದರು. ಜಿಲ್ಲಾ ಸಿಐಟಿಯು ಅಧ್ಯಕ್ಷ ಜಿ.ಎಸ್.ನಾಗರಾಜ್ ಅಧ್ಯಕ್ಷತೆ ವಹಿಸಿದ್ದರು. ವಿಐಎಸ್‌ಎಲ್ ಕಾರ್ಮಿಕರ ಸಂಘದ ಅಧ್ಯಕ್ಷ ಚಂದ್ರಹಾಸ್, ಸಿಐಟಿಯು ಉಪಾಧ್ಯಕ್ಷ ಎಸ್.ಬಿ. ಶಿವಶಂಕರ್, ಬಿಎಸ್‌ಎನ್‌ಎಲ್‌ನ ವೈ.ಆರ್. ನಾಗರಾಜ್ ಇತರರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.