ADVERTISEMENT

ಕಾಲುವೆ ಸೋರಿಕೆ: ಹೊಲಗಳಿಗೆ ನುಗ್ಗಿದ ನೀರು

​ಪ್ರಜಾವಾಣಿ ವಾರ್ತೆ
Published 9 ಆಗಸ್ಟ್ 2011, 19:30 IST
Last Updated 9 ಆಗಸ್ಟ್ 2011, 19:30 IST
ಕಾಲುವೆ ಸೋರಿಕೆ: ಹೊಲಗಳಿಗೆ ನುಗ್ಗಿದ ನೀರು
ಕಾಲುವೆ ಸೋರಿಕೆ: ಹೊಲಗಳಿಗೆ ನುಗ್ಗಿದ ನೀರು   

ಹಾವೇರಿ: ಜಿಲ್ಲೆಯ ರಾಣೆಬೆನ್ನೂರ ತಾಲ್ಲೂಕಿನ ಹಲಗೇರಿ ಗ್ರಾಮದ ಬಳಿ ತುಂಗಾ ಮೇಲ್ದಂಡೆ ಯೋಜನೆಯ ಮುಖ್ಯ ಕಾಲುವೆಗೆ ನೀರು ಬಿಟ್ಟ ಮೊದಲ ದಿನವೇ ಕಾಲುವೆಯಲ್ಲಿ ಉಂಟಾದ ಸೋರಿಕೆಯಿಂದ ಭಾರಿ ಪ್ರಮಾಣದ ನೀರು ಜಮೀನಿಗೆ ನುಗ್ಗಿ ಸುಮಾರು 50 ಎಕರೆಗೂ ಹೆಚ್ಚಿನ ಪ್ರದೇಶದಲ್ಲಿನ ಬೆಳೆಗೆ ಹಾನಿಯಾಗಿದೆ.

ಯೋಜನೆಯ ರಾಣೆಬೆನ್ನೂರ ವಿಭಾಗದ ವ್ಯಾಪ್ತಿಯಲ್ಲಿ ಬರುವ ಹಲಗೇರಿ ಗ್ರಾಮದ ಬಳಿಯ ಮುಖ್ಯ ಕಾಲುವೆಗೆ ಸೋಮವಾರವಷ್ಟೇ ನೀರು ಬೀಡಲಾಗಿದೆ. ಮುಖ್ಯ ಕಾಲುವೆಯಿಂದ ಉಪ ಕಾಲುವೆ, ವಿತರಣಾ ಕಾಲುವೆಗಳಿಗೆ ನೀರು ಬಿಡಲು ಅಳವಡಿಸಿರುವ ಗೇಟ್ ಬಂದ್ ಮಾಡಲಾಗಿದ್ದರೂ, ಆ ಗೇಟ್ ಮೂಲಕವೇ ನೀರು ಸೋರಿಕೆಯಾಗಿ ಹೊಲಗಳಿಗೆ ನುಗ್ಗಿದೆ. ಸೋಮವಾರ ರಾತ್ರಿಯಿಂದ ಮಂಗಳವಾರ ಸಂಜೆವರೆಗೆ ನಿರಂತರವಾಗಿ ನೀರು ಸೋರಿಕೆಯಾಗುತ್ತಿತ್ತು.

ಇದರಿಂದ ತುಂಗಾ ಮೇಲ್ದಂಡೆ ಯೋಜನೆಗಾಗಿ 28.5 ಎಕರೆ ಜಮೀನು ಕಳೆದುಕೊಂಡ ಹಲಗೇರಿ ಗ್ರಾಮದ ಬಸನಗೌಡ ಶಿವನಗೌಡ ಮಾಳಗಿ ಸೇರಿದಂತೆ ನಾಲ್ಕೈದು ರೈತರ ಜಮೀನುಗಳಲ್ಲಿನ ಗೋವಿನಜೋಳ, ಬಿ.ಟಿ ಹತ್ತಿ ಬೆಳೆಗಳಿಗೆ ಹಾನಿಯಾಗಿದೆ.

ಪರಿಶೀಲಿಸಿಲ್ಲ: ಕಾಲುವೆಗೆ ನೀರು ಬಿಡುವ ಮುನ್ನ ಅಧಿಕಾರಿಗಳು ಕಾಲುವೆ ಹಾಗೂ ಗೇಟ್‌ಗಳ ಪರಿಶೀಲನೆ ನಡೆಸಿ ನೀರು ಬಿಡಬೇಕಿತ್ತು. ಆದರೆ ಮುಖ್ಯ ಕಾಲುವೆ ನಿರ್ಮಿಸಿದ ನಂತರ ಒಮ್ಮೆಯೂ ಪರಿಶೀಲನೆ ನಡೆಸದ ಅಧಿಕಾರಿಗಳು ಏಕಾಏಕಿ ನೀರು ಬಿಟ್ಟಿರುವುದು ಸೋರಿಕೆಗೆ ಕಾರಣವಾಗಿದೆ ಎಂದು ರೈತ ಶಶಿ ಮಾಳಗಿ ಆರೋಪಿಸಿದ್ದಾರೆ.

ಸೋರಿಕೆಯಾಗುತ್ತಿರುವ ನೀರನ್ನು ತಕ್ಷಣವೇ ನಿಲ್ಲಿಸಬೇಕು. ನೀರು ನುಗ್ಗಿ ಹಾನಿಯಾಗಿರುವ ಬೆಳೆಗೆ ಪರಿಹಾರ ನೀಡಬೇಕು. ಇಲ್ಲವಾದರೆ, ಕಾಲುವೆಯಲ್ಲಿ ತಡೆ ಹಿಡಿದ ನೀರನ್ನು ತಡೆಗೋಡೆ ಒಡೆದು ಮುಂದೆ ಹರಿಬಿಡಲಾಗುವುದು ಎಂದು ಎಚ್ಚರಿಸಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.