ADVERTISEMENT

ಕುಡಿಯುವ ನೀರಿಗೆ ಕೊಳಚೆ...

​ಪ್ರಜಾವಾಣಿ ವಾರ್ತೆ
Published 18 ಜೂನ್ 2013, 10:18 IST
Last Updated 18 ಜೂನ್ 2013, 10:18 IST

ಗುಲ್ಬರ್ಗ: ಜಿಲ್ಲೆಯ ಎಲ್ಲ ಶಾಸಕರು, ಕೇಂದ್ರ ಸಚಿವರು, ಸಂಸದರು ಗುಲ್ಬರ್ಗ ನಗರದಲ್ಲಿ ವಾಸಿಸುತ್ತಾರೆ. ಆದರೆ  ನಗರಕ್ಕೆ ಕುಡಿಯುವ ನೀರು ಪೂರೈಸುವ ಭೀಮಾ ಬ್ಯಾರೇಜ್‌ಗೆ ಕೊಳಚೆ ನೀರನ್ನೂ ಬಿಡಲಾಗುತ್ತಿದೆ. ಎಲ್ಲರೂ ಅದನ್ನೇ ಕುಡಿಯುತ್ತಾರೆ. ಸರ್ಕಾರಕ್ಕೆ ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕು ಎಂದು ಶಾಸಕ ದತ್ತುಪಾಟೀಲ ರೇವೂರ ಒತ್ತಾಯಿಸಿದರು.

ಜಿಲ್ಲಾಧಿಕಾರಿ ಕಚೇರಿಯಲ್ಲಿ ಸೋಮವಾರ ನಡೆದ ಪ್ರಥಮ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.

ಈ ಬಗ್ಗೆ ಕರ್ನಾಟಕ ರಾಜ್ಯ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಅಧಿಕಾರಿಗಳು ಪ್ರತಿಕ್ರಿಯಿಸಿ, `ನಗರದ ಒಳಚರಂಡಿಯ ನೀರನ್ನು ಆಕ್ಸಿಡೈಸೇಷನ್ ಮಾಡಿ ಬಿಡಲಾಗುತ್ತದೆ. ನಾಲಾ ನೀರನ್ನು ನೇರವಾಗಿ ಭೀಮಾ ನದಿ ಹರಿಯಬಿಡಲಾಗುತ್ತದೆ. ಗುಲ್ಬರ್ಗದಲ್ಲಿ ಪೂರ್ಣ ಪ್ರಮಾಣದ ಕೊಳಚೆ ನೀರು ಶುದ್ಧೀಕರಣ (ಟ್ರೀಟ್‌ಮೆಂಟ್ ಪ್ಲಾಂಟ್) ಇಲ್ಲ' ಎಂದರು. ನಗರದಿಂದ ಹೊರಹೋಗುವ 70 ಎಂಎಲ್‌ಡಿ ಕೊಳಚೆ ನೀರನ್ನು ಶುದ್ಧೀಕರಿಸುವ ಯೋಜನೆಯನ್ನು ಸರ್ಕಾರ ನೀಡಬೇಕು ಎಂದು ಸಭೆಯಲ್ಲಿ ಎಲ್ಲ ಜನಪ್ರತಿನಿಧಿಗಳು ಒತ್ತಾಯಿಸಿದರು. 

ನೂರು ಕೋಟಿ ಕಾಮಗಾರಿ: `ಮುಖ್ಯಮಂತ್ರಿ ವಿಶೇಷ ಅನುದಾನದ 2 ನೂರು ಕೋಟಿ ರೂಪಾಯಿ ಯೋಜನೆಗಳ ಅಡಿ ನಡೆಯುತ್ತಿರುವ ಕಾಮಗಾರಿಗಳನ್ನು ವೇಗಗೊಳಿಸುವ ನಿಟ್ಟಿನಲ್ಲಿ ಶೀಘ್ರವೇ ಸಭೆ ನಡೆಸಲಾಗುವುದು' ಎಂದು ಜಿಲ್ಲಾ ಉಸ್ತುವಾರಿ ಸಚಿವ ಖಮರುಲ್ ಇಸ್ಲಾಂ ಭರವಸೆ ನೀಡಿದರು.

`ಮೊದಲ ನೂರು ಕೋಟಿ ರೂಪಾಯಿಯಲ್ಲಿ ಕೈಗೊಂಡ ಏಳು ರಸ್ತೆ ಕಾಮಗಾರಿಗಳ ಪೈಕಿ ಮೂರಕ್ಕೆ ಇನ್ನೂ ಗುತ್ತಿಗೆದಾರರು ಸಿಕ್ಕಿಲ್ಲ. ಉಳಿದ ನಾಲ್ಕು ಕಾಮಗಾರಿ ಮೂರು ವರ್ಷ ಕಳೆದರೂ ಮುಗಿದಿಲ್ಲ' ಎಂದು ಪಾಲಿಕೆ ಅಧಿಕಾರಿಗಳು ತಿಳಿಸಿದರು.

`ಪೈಕಿ ಆಳಂದ- ರೈಲು ನಿಲ್ದಾಣ ತನಕ ರಸ್ತೆಯನ್ನು ಜುಲೈ ಅಂತ್ಯದೊಳಗೆ ಮುಗಿಸುತ್ತೇವೆ. ಟೆಂಡರ್ ಕರೆದರೂ ಗುತ್ತಿಗೆದಾರರು ಬಾರದ ಕಾಮಗಾರಿಗಳ ಬಗ್ಗೆ ಸರ್ಕಾರ ಕ್ರಮಕೈಗೊಳ್ಳಬೇಕು' ಎಂದು ಅಧಿಕಾರಿಗಳು ಮನವಿ ಮಾಡಿದರು. ಒಟ್ಟಾರೆ ಪಾಲಿಕೆ ಕಾರ್ಯವೈಖರಿ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಜನಪ್ರತಿನಿಧಿಗಳು, ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ನಗರದ ವರ್ತುಲ ರಸ್ತೆಯ ಎರಡು ಕಡೆ ರುದ್ರಭೂಮಿ ನಿರ್ಮಾಣಕ್ಕೆ ಸರ್ಕಾರಿ ಜಾಗ ಪರಿಶೀಲಿಸಬೇಕು. ಇಲ್ಲದಿದ್ದರೆ ಖಾಸಗಿ ಜಾಗ ಖರೀದಿಸಿ ರುದ್ರಭೂಮಿ ನಿರ್ಮಿಸಬೇಕು ಎಂದು ಜಿಲ್ಲಾಡಳಿತಕ್ಕೆ ಸಚಿವ ಶರಣ ಪ್ರಕಾಶ್ ಸೂಚಿಸಿದರು. ಜಾಗ ಖರೀದಿಗೆ ಪ್ರತ್ಯೇಕ ಅನುದಾನವನ್ನು ಸಚಿವರು ಸರ್ಕಾರದಿಂದ ಮಂಜೂರು ಮಾಡಿಸಬೇಕು ಎಂದು ಶಾಸಕ ರೇವೂರ ಒತ್ತಾಯಿಸಿದರು.

ಶೌಚಾಲಯ ನಿರ್ಮಾಣಕ್ಕೆ ಜಾಗವಿಲ್ಲ...
ಮುಖ್ಯಮಂತ್ರಿ ಅನುದಾನದ 100 ಕೋಟಿ ರೂಪಾಯಿ ಯೋಜನೆಯಲ್ಲಿ ನಗರದ 48 ಕಡೆ ಶೌಚಾಲಯ ನಿರ್ಮಾಣಕ್ಕೆ ಕಾರ್ಯಯೋಜನೆ ಸಿದ್ಧಪಡಿಸಲಾಗಿತ್ತು. ಈ ಕಾಮಗಾರಿಯನ್ನು ಜಾಗ ಸಿಗದ ಕಾರಣ ರದ್ದುಪಡಿಸಲಾಗಿದೆ ಎಂದು ಹೇಳುವ ಮೂಲಕ ಅಧಿಕಾರಿಗಳು ಸಭೆಯಲ್ಲಿ ಅಚ್ಚರಿ ಮೂಡಿಸಿದರು.

`ಈಗಿರುವ ಶೌಚಾಲಯಗಳೇ ಬಳಕೆಗೆ ಯೋಗ್ಯವಾಗಿಲ್ಲ. ಹೀಗಾಗಿ ಅವುಗಳನ್ನು ದುರಸ್ತಿ ಮಾಡಲು ಮೊದಲ ಆದ್ಯತೆ ನೀಡುತ್ತಿದ್ದೇವೆ' ಎಂದು ಜಿಲ್ಲಾಧಿಕಾರಿ ಎನ್.ಎಸ್.ಪ್ರಸನ್ನಕುಮಾರ್ ಸಮರ್ಥಿಸಿಕೊಂಡರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT