ADVERTISEMENT

ಕುಷ್ಟಗಿ: ಮಹಿಳಾ ವಾಲಿಬಾಲ್ ಪಂದ್ಯ

​ಪ್ರಜಾವಾಣಿ ವಾರ್ತೆ
Published 28 ಜನವರಿ 2012, 19:30 IST
Last Updated 28 ಜನವರಿ 2012, 19:30 IST
ಕುಷ್ಟಗಿ: ಮಹಿಳಾ ವಾಲಿಬಾಲ್ ಪಂದ್ಯ
ಕುಷ್ಟಗಿ: ಮಹಿಳಾ ವಾಲಿಬಾಲ್ ಪಂದ್ಯ   

ಕುಷ್ಟಗಿ:  ಶಿಕ್ಷಣ ಸೇರಿದಂತೆ ಸಮಾಜದ ಎಲ್ಲ ಸ್ತರಗಳಲ್ಲಿಯೂ ಮಹಿಳೆ ಪುರುಷನಷ್ಟೇ ಸರಿಸಮಾನವಾಗಿ ಬೆಳೆಯುತ್ತಿದ್ದಾಳೆ. ಕ್ರೀಡಾ ಕ್ಷೇತ್ರದಲ್ಲಿರುವ ವಿಪುಲ ಅವಕಾಶಗಳನ್ನು ಬಳಸಿಕೊಂಡು ಸಾಕಷ್ಟು ಮಹಿಳಾ ಪ್ರತಿಭೆಗಳು ಬೆಳಕಿಗೆ ಬರುವಂತಾಗಿದೆ ಎಂದು ಶಾಸಕ ಅಮರೇಗೌಡ ಬಯ್ಯಾಪೂರ ಶನಿವಾರ ಇಲ್ಲಿ ಹೇಳಿದರು.

ಸ್ಥಳೀಯ ಪ್ರಥಮದರ್ಜೆ ಕಾಲೇಜಿನಲ್ಲಿ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಏಕ ವಲಯ ಮಹಿಳಾ ವಾಲಿಬಾಲ್ ಪಂದ್ಯ ಉದ್ಘಾಟಿಸಿ ಮಾತನಾಡಿದ ಅವರು ಕ್ರೀಡೆಗಳಿಗೆ ಸರ್ಕಾರ ನೀಡುವ ಪ್ರೋತ್ಸಾಹ, ನೆರವನ್ನು ಸದುಪಯೋಗ ಪಡಿಸಿಕೊಳ್ಳುವಂತೆ ಸಲಹೆ ನೀಡಿದರು.

ಮಹಿಳೆಯರಿಗೆ ಸಾಮಾಜಿಕವಾಗಿ ಸೂಕ್ತ ಸ್ಥಾನಮಾನ ಕಲ್ಪಿಸುವ ನಿಟ್ಟಿನಲ್ಲಿ ಶೇಕಡ 53ರಷ್ಟು ರಾಜಕೀಯ ಮೀಸಲಾತಿ ನೀಡಿದ್ದರಿಂದ ಗ್ರಾಮ ಪಂಚಾಯಿತಿಯಿಂದ ಜಿಲ್ಲಾ ಪಂಚಾಯತಿವರೆಗೂ ಮಹಿಳಾ ಪ್ರತಿನಿಧಿಗಳ ಸಂಖ್ಯೆ ಹೆಚ್ಚಿದೆ. ಶೈಕ್ಷಣಿಕ ಬೆಳವಣಿಗೆಯಲ್ಲಿ ನಗರ ಮತ್ತು ಪಟ್ಟಣ ಪ್ರದೇಶದ ವಿದ್ಯಾರ್ಥಿನಿಯರು ಮುಂಚೂಣಿಯಲ್ಲಿದ್ದಾರೆ. ಗ್ರಾಮಾಂತರ ಪ್ರದೇಶದಲ್ಲಿ ಹಿಂಜರಿಕೆ, ಕೀಳರಿಮೆ ಮತು ಅನಾನುಕೂಲಗಳಿಂದಾಗಿ ಅಲ್ಲಿನ ಮಹಿಳೆಯರು ಶೈಕ್ಷಣಿಕವಾಗಿ ಹಿಂದುಳಿಯುವಂತಾಗಿದ್ದು ಅಂಥ ಸ್ಥಿತಿ ಬದಲಾಗಬೇಕು ಎಂದರು.

ಪ್ರಾಚಾರ್ಯ ಹೇಮಂತ ಭೂತನಾಳ ಅಧ್ಯಕ್ಷತೆ ವಹಿಸಿ ಮಾತನಾಡಿ, ಪಾಲಕರು ಮಕ್ಕಳಿಗೆ ಧೈರ್ಯ ತುಂಬುವ ಕೆಲಸ ಮಾಡಬೇಕು ಎಂದರು.

ಶರೀರ ಮತ್ತು ಮನಸ್ಸು ಎರಡೂ ಗಟ್ಟಿಯಾಗಿದ್ದರೆ ಮಾತ್ರ ಸದೃಢ ಸಮಾಜ ನಿರ್ಮಾಣವಾಗುತ್ತದೆ. ಯಾವುದೇ ದೇಶದ ನೈಜ ಸಂಪತ್ತು ಅಲ್ಲಿಯ ಸದೃಢ ಜನತೆಯನ್ನು ಅವಲಂಬಿಸಿರುತ್ತದೆ ಎಂದರು. ಉಪನ್ಯಾಸಕ ಬಸವರಾಜ ಕಂಬಳಿ ಸ್ವಾಗತಿಸಿ, ವಂದಿಸಿದರು.
                         

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.