ADVERTISEMENT

ಕೂಲಿ ಕೆಲಸಕ್ಕೆ ದಲಿತರಿಗೆ ಬಹಿಷ್ಕಾರ

​ಪ್ರಜಾವಾಣಿ ವಾರ್ತೆ
Published 15 ಜೂನ್ 2012, 19:30 IST
Last Updated 15 ಜೂನ್ 2012, 19:30 IST
ಕೂಲಿ ಕೆಲಸಕ್ಕೆ ದಲಿತರಿಗೆ ಬಹಿಷ್ಕಾರ
ಕೂಲಿ ಕೆಲಸಕ್ಕೆ ದಲಿತರಿಗೆ ಬಹಿಷ್ಕಾರ   

ಕಂಪ್ಲಿ (ಬಳ್ಳಾರಿ ಜಿಲ್ಲೆ):  ಇಲ್ಲಿಗೆ ಸಮೀಪದ ಹಳೇದರೋಜಿ (ಸಂಡೂರು ತಾಲ್ಲೂಕು) ಗ್ರಾಮದಲ್ಲಿ ವಿವಿಧ ಕಾರಣಗಳಿಗಾಗಿ ಸುಮಾರು 50 ದಲಿತ ಕುಟುಂಬಗಳ ಸದಸ್ಯರನ್ನು ಕೂಲಿ ಕೆಲಸಕ್ಕೆ ಕರೆಯದೆ ಬಹಿಷ್ಕಾರ ಹಾಕಿರುವ ಘಟನೆ ನಡೆದಿರುವುದು ತಡವಾಗಿ ಬೆಳಕಿಗೆ ಬಂದಿದೆ.

ಗ್ರಾಮದ ಕೆಲ ಸಮುದಾಯದವರು ದಲಿತ ಯುವಕರನ್ನು ಕೂಲಿ ಕೆಲಸಕ್ಕೆ ಕರೆಯುತ್ತಿಲ್ಲ. ಜೊತೆಗೆ ಖಾಸಗಿ ಕಂಪೆನಿ ಕಾರ್ಮಿಕ ಗುತ್ತಿಗೆದಾರರೂ ಸಹಿತ ದಲಿತರನ್ನು ಕೂಲಿ ಕೆಲಸಕ್ಕೆ ಕರೆಯದೆ ಏಳು ದಿನಗಳಿಂದ ಕಡೆಗಣಿಸಿದ ಪರಿಣಾಮ ಜೀವನ ದುಸ್ತರವಾಗಿದೆ.

ಮೇ 29ರಂದು ಗ್ರಾಮದಲ್ಲಿ ಡಾ.ಬಾಬು ಜಗಜೀವನರಾಮ್ ಜನಜಾಗೃತಿ ವೇದಿಕೆ ಅಸ್ತಿತ್ವಕ್ಕೆ ಬಂದಿದ್ದು, ಸಂಘದ ಪದಾಧಿಕಾರಿಗಳೆಲ್ಲರೂ ಸೇರಿ ಗ್ರಾಮದ ಹೋಟೆಲ್ ಮತ್ತು ಕ್ಷೌರದಂಗಡಿಗಳಿಗೆ ಪ್ರವೇಶಕ್ಕೆ ದಲಿತರಿಗೆ ಅವಕಾಶ ಮಾಡಿಕೊಡುವಂತೆ ಕುಡುತಿನಿ ಪೊಲೀಸ್ ಠಾಣೆಗೆ ಮನವಿ ಮಾಡಿಕೊಂಡಿದ್ದರು. ಪೊಲೀಸರು ಗ್ರಾಮಕ್ಕೆ ಆಗಮಿಸಿ ಶಾಂತಿ ಸಭೆ ನಡೆಸಿ ಹೋಟೆಲ್, ಕ್ಷೌರದಂಗಡಿಗಳಿಗೆ ಪ್ರವೇಶಕ್ಕೆ ಅನುವು ಮಾಡಿಕೊಟ್ಟಿದ್ದರು.

ಈ ಘಟನೆಯ ನಂತರ ಗ್ರಾಮದ ಕೆಲವರು ಹರಿಜನರನ್ನು ಕೆಲಸಕ್ಕೆ ಕರೆದರೆ ರೂ 1 ಸಾವಿರ ದಂಡ ಹಾಕಲಾಗುವುದು ಎಂಬ ನಿರ್ಧಾರ ತೆಗೆದುಕೊಳ್ಳುವುದರ ಜೊತೆಗೆ ಹಾಲಿನ ಮೇಲೆ ಪ್ರಮಾಣ ಮಾಡಿದ್ದಾರೆ ಎನ್ನುವ ಒಳಗುಟ್ಟನ್ನು ದಲಿತರು ಈ ಸಂದರ್ಭದಲ್ಲಿ ಬಹಿರಂಗಪಡಿಸಿದರು.

`ಸರ್ಕಾರ ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ ನೆಮ್ಮದಿಯ ಜೀವನ ನಡೆಸಲು ಅವಕಾಶ ಕಲ್ಪಿಸುವಂತೆ ಕರ್ನಾಟಕ ರಾಜ್ಯ ಡಾ.ಬಾಬು ಜಗಜೀವನರಾಮ್ ಜನಜಾಗೃತಿ ವೇದಿಕೆ ಗ್ರಾಮ ಘಟಕ ಅಧ್ಯಕ್ಷ ಎಚ್. ಮಾರೆಪ್ಪ ಮತ್ತು ಇತರ ಪದಾಧಿಕಾರಿಗಳು ಆಗ್ರಹಿಸುತ್ತಾರೆ.

ಗ್ರಾಮದ ಹತ್ತಿರವಿರುವ ಕಣಿವಿ ಮಾರೆಮ್ಮ ದೇವಸ್ಥಾನ ಬಳಿ ಕುಡಿಯುವ ನೀರು ತರಲು ದಲಿತರು ತೆರಳಿದಾಗ ಕೆಲವರು ತಕರಾರು ಮಾಡಿದ ಘಟನೆಯೂ ನೆಡೆದಿದೆ.   ಗ್ರಾಮದಲ್ಲಿ ಪೊಲೀಸ್ ಕಾವಲು ಮುಂದುವರಿದಿದ್ದರೂ ವಾತಾವರಣ ಬೂದಿ ಮುಚ್ಚಿದ ಕೆಂಡದಂತಿರುವುದು ಮೇಲ್ನೋಟಕ್ಕೆ ಕಂಡು ಬರುತ್ತದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.