ADVERTISEMENT

ಕೃಷಿಯಲ್ಲೂ ಸ್ಪರ್ಧಾ ಮನೋಭಾವ ಅಗತ್ಯ: ಸಚಿವ

​ಪ್ರಜಾವಾಣಿ ವಾರ್ತೆ
Published 16 ಜನವರಿ 2012, 19:30 IST
Last Updated 16 ಜನವರಿ 2012, 19:30 IST

ದಾವಣಗೆರೆ: ರೈತರು ಸ್ಪರ್ಧಾ ಮನೋಭಾವದಿಂದ ಕೃಷಿ ಕಾಯಕದಲ್ಲಿ ತೊಡಗಿಸಿಕೊಂಡು ಪ್ರಶಸ್ತಿ ಪಡೆಯಬೇಕು ಎಂದು ಸಚಿವ ಎಸ್.ಎ. ರವೀಂದ್ರನಾಥ್ ಹೇಳಿದರು.

ಕೃಷಿ ಇಲಾಖೆ ವತಿಯಿಂದ ಸೋಮವಾರ ಹಮ್ಮಿಕೊಂಡಿದ್ದ ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಕೃಷಿ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು.

ಹೆಚ್ಚು ಬೆಳೆ ಬೆಳೆದ ರೈತರನ್ನು ಗುರುತಿಸಿ ಪ್ರಶಸ್ತಿ ಕೊಡುತ್ತಿರುವುದು ಶ್ಲಾಘನೀಯ. ರೈತರೂ ಹೊಸ ಪ್ರಯೋಗಗಳನ್ನು ಮಾಡಬೇಕು. ಏಕಬೆಳೆ ಪದ್ಧತಿಯ ಬದಲಿಗೆ ಬಹುಬೆಳೆ ಪದ್ಧತಿ ಅನುಸರಿಸಿ ಭೂಮಿಯ ಸಾರ ಉಳಿಸಿಕೊಳ್ಳಬೇಕು. ತೋಟಗಾರಿಕಾ ಬೆಳೆಗಳನ್ನೂ ಬೆಳೆದರೆ ಅವುಗಳ ಫಲ ಕೊನೆಯವರೆಗೂ ಬರುತ್ತದೆ ಎಂದು ಹೇಳಿದರು.

ವಿಧಾನ ಪರಿಷತ್ ಮುಖ್ಯ ಸಚೇತಕ ಡಾ.ಎ.ಎಚ್. ಶಿವಯೋಗಿಸ್ವಾಮಿ ಮಾತನಾಡಿ, ಇಂದು ಮಾತನಾಡುವುದೇ ದೊಡ್ಡ ಸಾಧನೆಯಾಗಿದೆ. ಆದರೆ, ಸರ್ಕಾರದ ಸೌಲಭ್ಯಗಳನ್ನು ಬಳಸಿಕೊಂಡು ಹೇಗೆ ಸಾಧನೆ ಮಾಡಬಹುದು ಎಂಬುದನ್ನು ಇಲ್ಲಿನ ರೈತರು ತೋರಿಸಿಕೊಟ್ಟಿದ್ದಾರೆ. ಹಸಿರು ಕ್ರಾಂತಿಯ ಪರಿಣಾಮ ದೇಶದಲ್ಲಿ ಎಲ್ಲರಿಗೂ ಅನ್ನ ನೀಡುವುದು ಸಾಧ್ಯವಾಗಿದೆ. ಕೃಷಿ ಕ್ಷೇತ್ರ ಸೊರಗಿದರೆ ದೇಶದ ಯಾವ ಕ್ಷೇತ್ರವೂ ಅಭಿವೃದ್ಧಿ ಹೊಂದುವುದಿಲ್ಲ ಎಂದರು.

ಶಾಸಕ ಎಂ. ಬಸವರಾಜ ನಾಯ್ಕ ಮಾತನಾಡಿ, ಬೇರೆ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರಿಗೆ ಲಕ್ಷಾಂತರ ರೂ ನಗದು ಬಹುಮಾನ ನೀಡಲಾಗುತ್ತದೆ. ಅಂತೆಯೇ, ಇಲ್ಲಿಯೂ ಪ್ರಶಸ್ತಿಯ ನಗದು ಮೊತ್ತ ಹೆಚ್ಚಾಗಬೇಕು ಎಂದರು.
ಜಿಲ್ಲಾ ಪಂಚಾಯ್ತಿ ಅಧ್ಯಕ್ಷ ಎಸ್.ಎಂ. ವೀರೇಶ್ ಹನಗವಾಡಿ, ಸದಸ್ಯರಾದ ಅಂಬಿಕಾ ರಾಜಪ್ಪ, ಸಹನಾ ರವಿ, ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷ ಜಿ. ಹನುಮಂತಪ್ಪ ಮತ್ತಿತರರು ಹಾಜರಿದ್ದರು.

ಜಂಟಿ ಕೃಷಿ ನಿರ್ದೇಶಕ ಆರ್.ಜಿ. ಗೊಲ್ಲರ್ ಕಾರ್ಯಕ್ರಮ ನಿರೂಪಿಸಿದರು. ಶ್ರೀನಿವಾಸ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.