ADVERTISEMENT

ಕೃಷ್ಣ ಜನ್ಮಾಷ್ಟಮಿಗೆ ಸಂಭ್ರಮದ ಚಾಲನೆ

​ಪ್ರಜಾವಾಣಿ ವಾರ್ತೆ
Published 21 ಆಗಸ್ಟ್ 2011, 19:30 IST
Last Updated 21 ಆಗಸ್ಟ್ 2011, 19:30 IST
ಕೃಷ್ಣ ಜನ್ಮಾಷ್ಟಮಿಗೆ ಸಂಭ್ರಮದ ಚಾಲನೆ
ಕೃಷ್ಣ ಜನ್ಮಾಷ್ಟಮಿಗೆ ಸಂಭ್ರಮದ ಚಾಲನೆ   

ಉಡುಪಿ: ಪೊಡವಿಗೊಡೆಯ ಕೃಷ್ಣನಿಗೆ ಲೀಲೋತ್ಸವದ ಸಂಭ್ರಮ. ಭಾನುವಾರ ಬೆಳಿಗ್ಗೆಯಿಂದಲೇ ಮಠದಲ್ಲಿ ವಿಶೇಷ ಪೂಜೆ, ಪ್ರಾರ್ಥನೆ ನಡೆದವು. ಮುದ್ದುಕೃಷ್ಣನ ಕಣ್ತುಂಬ ಕಾಣುವ ಹಂಬಲದಿಂದ ರಥಬೀದಿಯ ಸುತ್ತ ಬೆಳಿಗ್ಗೆಯಿಂದಲೇ ಜನಜಾತ್ರೆ ನೆರೆದಿತ್ತು. 

ಶ್ರೀಕೃಷ್ಣಮಠವನ್ನು ಹೂವು, ತೆಂಗು, ಕಂಗಿನಿಂದ ವಿಶೇಷವಾಗಿ ಅಲಂಕರಿಸಲಾಗಿತ್ತು. ಮಠದೊಳಗೆ ಮಲ್ಲಿಗೆ, ಸೇವಂತಿಗೆ, ಕನಕಾಂಬರ ಹೂಗಳಿಂದ ಕಣ್ಮನ ಸೆಳೆಯುವ ಅಲಂಕಾರ ಮಾಡಲಾಗಿತ್ತು.

ಪರ್ಯಾಯ ಶೀರೂರು ಲಕ್ಷ್ಮೀವರ ತೀರ್ಥರು ಪ್ರಾತಃಕಾಲದಿಂದಲೇ ಸಾಂಪ್ರದಾಯಿಕ ಪೂಜೆಗಳನ್ನು ನೆರವೇರಿಸಿದರು. ಪಂಚಾಮೃತಾಭಿಷೇಕ, ಕಳಶಪೂಜೆ, ಗೋಪೂಜೆ, ಮುಖ್ಯಪ್ರಾಣನಿಗೆ ಪೂಜೆ ಸೇರಿದಂತೆ ಹಲವು ಪೂಜೆಗಳನ್ನು ನೆರವೇರಿಸಲಾಯಿತು.

ತೊಟ್ಟಿಲಲ್ಲಿ ಕುಳಿತು ಬೆಣ್ಣೆಮೆಲ್ಲುವ ಬಾಲಗೋಪಾಲ ಅಲಂಕಾರವನ್ನು ಸ್ವಾಮೀಜಿ ಮುದ್ದುಕೃಷ್ಣನಿಗೆ ವಿಶೇಷವಾಗಿ ಮಾಡಿದರು. ಗರ್ಭಗುಡಿಯಲ್ಲಿನ ಘೃತ ನಂದಾದೀಪದಲ್ಲಿ ಮಿನುಗುತ್ತಿದ್ದ ಕೃಷ್ಣನನ್ನು ನವಗೃಹ ಕಿಂಡಿಯ ಮೂಲಕ ದರ್ಶನ ಮಾಡಿದ ಭಕ್ತರು ಧನ್ಯತಾಭಾವ ಹೊಂದಿದರು.ಬೆಳಿಗ್ಗೆಯಿಂದ ಉಪವಾಸವಿದ್ದು ರಾತ್ರಿ ಚಂದ್ರೋದಯ ಕಾಲದಲ್ಲಿ ಶ್ರೀಕೃಷ್ಣನಿಗೆ ವಿಶೇಷವಾದ ಲಡ್ಡು, ಚಕ್ಕುಲಿ ಮುಂತಾದ ಭಕ್ಷ್ಯಭೋಜ್ಯಾದಿಗಳನ್ನು ನಿವೇದಿಸಿ ಮಹಾಪೂಜೆ (ರಾತ್ರಿ11ಕ್ಕೆ) ನಂತರ ತುಳಸಿಕಟ್ಟೆಯಲ್ಲಿ ಭಕ್ತ ಸಮೂಹದೊಂದಿಗೆ ರಾತ್ರಿ 11.47ಕ್ಕೆ ಚಂದ್ರನಿಗೆ ಅರ್ಘ್ಯವೀಯಲಾಯಿತು.

ವಿವಿಧ ಭಜನಾ ಮಂಡಳಿಗಳಿಂದ ಹರಿಭಜನಾ ಕಾರ್ಯಕ್ರಮ, ಭಕ್ತಿಗೀತೆಗಳ ಗಾಯನ, ದಾಸಲಹರಿ, ಮಕ್ಕಳಿಂದ ನೃತ್ಯ ವೈಭವ, ಮುದ್ದುಕೃಷ್ಣ ಸ್ಪರ್ಧೆ, ಶ್ರೀಕೃಷ್ಣ ಬಾಲಲೀಲೆಯ ಸಮೂಹ ನೃತ್ಯ, ಕಣ್ಣಿಗೆ ಬಟ್ಟೆ ಕಟ್ಟಿ ಮೊಸರು ಕುಡಿಕೆ ಒಡೆಯುವ ಸ್ಪರ್ಧೆ, ಮೊಸರು ಕಡೆದು ಬೆಣ್ಣೆ ತೆಗೆಯುವ ಸ್ಪರ್ಧೆ, ಹುಲಿ ವೇಷ ಸ್ಪರ್ಧೆಗಳೆಲ್ಲ ಮಠದ ಆವರಣ, ರಥಬೀದಿಯಲ್ಲಿ ದಿನವಿಡೀ ನಡೆದವು.

ವಿಟ್ಲಪಿಂಡಿ: ಸೋಮವಾರ ಬೆಳಿಗ್ಗೆ 9 ಗಂಟೆಯಿಂದಲೇ ಮಹಾ ಅನ್ನಸಂತರ್ಪಣೆ ಪ್ರಾರಂಭವಾಗಲಿದೆ. ಮಧ್ಯಾಹ್ನ 2 ಗಂಟೆಗೆ ವಿಟ್ಲ ಪಿಂಡಿ ಮಹೋತ್ಸವ, ನವರತ್ನ ರಥದಲ್ಲಿ ಮೃಣ್ಮಯ ಮೂರ್ತಿಯನ್ನಿಟ್ಟು ಮೆರವಣಿಗೆ ಇನ್ನಿತರ ಕಾರ್ಯಕ್ರಮ ಜರುಗಲಿವೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.