ADVERTISEMENT

ಕೆಎಂಎಫ್‌ಗೆ ರೂ. 32 ಕೋಟಿ ಲಾಭ

​ಪ್ರಜಾವಾಣಿ ವಾರ್ತೆ
Published 6 ಏಪ್ರಿಲ್ 2011, 19:30 IST
Last Updated 6 ಏಪ್ರಿಲ್ 2011, 19:30 IST
ಕೆಎಂಎಫ್‌ಗೆ ರೂ. 32 ಕೋಟಿ ಲಾಭ
ಕೆಎಂಎಫ್‌ಗೆ ರೂ. 32 ಕೋಟಿ ಲಾಭ   

ಗುಲ್ಬರ್ಗ: ಕರ್ನಾಟಕ ಹಾಲು ಮಹಾಮಂಡಳಿಯು 2010-11ನೇ ಸಾಲಿನಲ್ಲಿ 32 ಕೋಟಿ ರೂಪಾಯಿ ಲಾಭ ಗಳಿಸಿದ್ದು, ಬಳ್ಳಾರಿ ಒಕ್ಕೂಟದ 69 ಸಿಬ್ಬಂದಿಯನ್ನು ಕಾಯಂಗೊಳಿಸಿರುವ ಮಾದರಿಯಲ್ಲಿ ಮಹಾಮಂಡಳಿಯ ವ್ಯಾಪ್ತಿಗೊಳಪಡುವ ವಿವಿಧ ಹಾಲು ಉತ್ಪಾದಕ ಒಕ್ಕೂಟಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ತಾತ್ಕಾಲಿಕ ಸಿಬ್ಬಂದಿ ಕಾಯಂಗೊಳಿಸಲು ಪ್ರಯತ್ನಿಸುವುದಾಗಿ ಕರ್ನಾಟಕ ಹಾಲು ಮಹಾಮಂಡಳಿಯ ಅಧ್ಯಕ್ಷ ಜಿ. ಸೋಮಶೇಖರ ರೆಡ್ಡಿ ಹೇಳಿದರು.

ನವೀಕರಣಗೊಂಡ ಗುಲ್ಬರ್ಗ ಡೇರಿ ಹಾಗೂ ನಂದಿನಿ ಹೈಟೆಕ್ ಪಾರ್ಲರ್ ಉದ್ಘಾಟನೆ ಮತ್ತು ಮುಖ್ಯದ್ವಾರದ ಶಿಲಾನ್ಯಾಸ ನೆರವೇರಿಸಿ ಅವರು ಮಾತನಾಡಿದರು.

ಹಾಲು ಉತ್ಪಾದನೆಯಲ್ಲಿ ಗುಜರಾತ್ ಮೊದಲ ಸ್ಥಾನದಲ್ಲಿದ್ದು, ಎರಡನೇ ಸ್ಥಾನದಲ್ಲಿರುವ ಕರ್ನಾಟಕ ರಾಜ್ಯವನ್ನು ಮೊದಲನೇ ಸ್ಥಾನಕ್ಕೆ ತರುವ ದೃಢಸಂಕಲ್ಪವನ್ನು ತಾವು ಮಾಡಿದ್ದು, ಇದಕ್ಕೆ ರೈತರು ಸಹಕರಿಸಬೇಕು ಎಂದು ಮನವಿ ಮಾಡಿದರು. ಗುಲ್ಬರ್ಗ ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದ ವಿವಿಧ ಬೇಡಿಕೆಗಳನ್ನು ಆದ್ಯತೆ ಮೇರೆಗೆ ಈಡೇರಿಸಲು ಪ್ರಯತ್ನಿಸುವುದಾಗಿ ಭರವಸೆ ನೀಡಿದರು. ಒಕ್ಕೂಟದಿಂದ ಹಾಲು ಶೇಖರಣಾ ಸಾಮರ್ಥ್ಯವನ್ನು ಮೂರು ಲಕ್ಷ ಲೀಟರಿಗೆ ಹೆಚ್ಚಿಸಿಕೊಳ್ಳಬೇಕು ಎಂದು ಸಲಹೆ ಮಾಡಿದರು.

ಗುಲ್ಬರ್ಗ- ಬೀದರ ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದ ಅಧ್ಯಕ್ಷ ಮಲ್ಲಿಕಾರ್ಜುನ ಬಿರಾದಾರ ಅಧ್ಯಕ್ಷತೆ ವಹಿಸಿದ್ದರು. ಎಚ್‌ಕೆಡಿಬಿ ಅಧ್ಯಕ್ಷ ಅಮರನಾಥ ಪಾಟೀಲ್, ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಅಧ್ಯಕ್ಷ ರಘುನಾಥರಾವ ಮಲ್ಕಾಪೂರೆ, ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಶಿವಪ್ರಭು ಪಾಟೀಲ್, ಬಳ್ಳಾರಿ ಪಾಲಿಕೆ ಸದಸ್ಯ ಮಲ್ಲನಗೌಡ, ಸಾಹೇಬಗೌಡ, ಮಹಾಮಂಡಳಿಯ ವ್ಯವಸ್ಥಾಪಕ ನಿರ್ದೇಶಕ ಡಾ.ಸುಧಾ ಕರ, ಮತ್ತಿತರ ಗಣ್ಯರು ಇದ್ದರು. ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕ ಡಾ. ಬುಕ್ಕಾ ಮಲ್ಲಿಕಾರ್ಜುನ ಸ್ವಾಗತಿಸಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.