ADVERTISEMENT

ಕೊಂಚಾವರಂ: 5 ವರ್ಷಗಳಲ್ಲಿ 97 ಮಕ್ಕಳ ಸಾವು

​ಪ್ರಜಾವಾಣಿ ವಾರ್ತೆ
Published 22 ಜುಲೈ 2012, 19:30 IST
Last Updated 22 ಜುಲೈ 2012, 19:30 IST

ಚಿಂಚೋಳಿ(ಗುಲ್ಬರ್ಗ ಜಿಲ್ಲೆ):  ಆಂಧ್ರಪ್ರದೇಶದ ಗಡಿಯಲ್ಲಿ ಬರುವ ತಾಲ್ಲೂಕಿನ ಕೊಂಚಾವರಂ ಸಮುದಾಯ ಆರೋಗ್ಯ ಕೇಂದ್ರದ ವ್ಯಾಪ್ತಿಯ ತಾಂಡಾ ಮತ್ತು ಹಳ್ಳಿಗಳಲ್ಲಿ 2007-08ರಿಂದ ಇಲ್ಲಿವರೆಗೆ ಒಂದು ವರ್ಷದೊಳಗಿನ 97 ಮಕ್ಕಳು ಸಾವನ್ನಪ್ಪಿವೆ ಎಂದು ಕೇಂದ್ರದ ವೈದ್ಯಾಧಿಕಾರಿ ಡಾ. ಶಿವಶರಣಪ್ಪ ಕಾಶೆಟ್ಟಿ ತಿಳಿಸಿದರು.

ಮಕ್ಕಳು ಆರೋಗ್ಯದಿಂದ ಜನಿಸಿದ್ದರೂ ಮತ್ತು ಉತ್ತಮ ಹವಾಮಾನವಿದ್ದರೂ, ಹೈಪೊಥರ್ಮಿಯಾ (ಚಳಿಯಿಂದ), ಉಸಿರುಗಟ್ಟುವಿಕೆ ಹಾಗೂ ಅವಧಿ ಪೂರ್ವ ಜನನ ಸಾವಿಗೆ ಕಾರಣಗಳು ಎಂದರು.

ಇಲ್ಲಿನ ಲಂಬಾಣಿ ತಾಂಡಾಗಳಲ್ಲಿ ತೀವ್ರ ಬಡತನ ಮತ್ತು ಅಜ್ಞಾನದಿಂದ ಹೆಣ್ಣು ಮಕ್ಕಳ ಬಗ್ಗೆ ಬೇಸರವಿದೆ. ಒಂದು ಕುಟುಂಬದಲ್ಲಿ ಪದೇಪದೇ ಹೆಣ್ಣು ಶಿಶು ಹುಟ್ಟುತ್ತಿರುವುದೇ ಇದಕ್ಕೆ ಕಾರಣ. ಪ್ರತಿಯೊಬ್ಬರೂ ಗಂಡು ಮಗುವನ್ನೇ ಬಯಸುವುದು ಹೆಚ್ಚಾಗಿ ಕಂಡುಬರುತ್ತಿದೆ ಎಂದರು.

ಆರೋಗ್ಯ ಕೇಂದ್ರದ ಹಿರಿಯ ಹಾಗೂ ಕಿರಿಯ ಸಹಾಯಕಿಯರು ಒಂದು ವರ್ಷದವರೆಗೂ ಬಾಣಂತಿಯರ ಮನೆಗಳಿಗೆ ವಾರಕ್ಕೊಮ್ಮೆ ಭೇಟಿ ನೀಡಿ ಅಗತ್ಯ ಸಲಹೆ ಸೂಚನೆಗಳನ್ನು ನೀಡುತ್ತಿದ್ದಾರೆ.

ಹಿಂದೆ ಆಸ್ಪತ್ರೆ ಹೆರಿಗೆ ಪ್ರಮಾಣ ಕಡಿಮೆಯಿದ್ದಾಗ ಶಿಶುಗಳ ಸಾವಿನ ಪ್ರಕರಣಗಳು ಹೆಚ್ಚಾಗಿದ್ದವು.   ಆಸ್ಪತ್ರೆಗಳಲ್ಲಿಯೇ ಹೆರಿಗೆ ಪ್ರಮಾಣ ಹೆಚ್ಚಿದ ನಂತರ ಶಿಶುಗಳ ಸಾವಿನ ಪ್ರಮಾಣ ಇಳಿಮುಖವಾಗಿದೆ ಎಂದು ವಿವರಿಸಿದರು.

ನ್ಯಾಯಾಂಗ ತನಿಖೆ ಅಗತ್ಯ: ಕೊಂಚಾವರಂ ಸುತ್ತಮುತ್ತಲಿನ ತಾಂಡಾಗಳಲ್ಲಿ ನಡೆಯುತ್ತಿದೆ ಎನ್ನಲಾದ ಕಂದಮ್ಮಗಳ ನಿಗೂಢ ಸಾವಿಗೆ ನಿಖರ ಕಾರಣ ಪತ್ತೆ ಹಚ್ಚಲು ರಾಜ್ಯ ಸರ್ಕಾರ ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ಒಪ್ಪಿಸಬೇಕೆಂದು ನಿವೃತ್ತ ಶಿಕ್ಷಕ ಹಾಗೂ ಬಂಜಾರಾ ಸಮಾಜದ ಮುಖಂಡ ಜಗನ್ನಾಥ ರಾಠೋಡ್ ಅವರು ಒತ್ತಾಯಿಸಿದ್ದಾರೆ.

ಒಂಟಿಚಿಂತಾ ತಾಂಡಾದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಒಂದು ದಶಕದ ಹಿಂದೆ ನಡೆದ ಮಕ್ಕಳ ಮಾರಾಟ ಪ್ರಕರಣ, ಬಡ ಲಂಬಾಣಿಗರಿಗೆ ಸರ್ಕಾರ ಒದಗಿಸಿದ ನೆರವು, ರೂ 10 ಕೋಟಿ ರೂಪಾಯಿ ಪ್ಯಾಕೇಜ್, ಸದ್ಯ ಲಂಬಾಣಿಗರ ಆರ್ಥಿಕ ಸ್ಥಿತಿಗತಿ, ಶೈಕ್ಷಣಿಕ ಮಟ್ಟ, ವರ್ಷದಲ್ಲಿ 6 ತಿಂಗಳು ಗುಳೆ ಹೋಗುವ ಕುರಿತು ತನಿಖೆ ನಡೆಸಿ ವಾಸ್ತವಾಂಶ ಬಯಲಿಗೆ ತರಬೇಕು ಹಾಗೂ ತಾಂಡಾದ ಸಮಗ್ರ ಅಭಿವೃದ್ಧಿಗೆ ಕ್ರಮ ಕೈಗೊಳ್ಳಬೇಕೆಂದು  ಒತ್ತಾಯಿಸಿದರು.

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.