ADVERTISEMENT

ಕೊಟ್ಟೂರೇಶ್ವರ ರಥೋತ್ಸವಕ್ಕೆ ಜನಸಾಗರ

​ಪ್ರಜಾವಾಣಿ ವಾರ್ತೆ
Published 26 ಫೆಬ್ರುವರಿ 2011, 16:55 IST
Last Updated 26 ಫೆಬ್ರುವರಿ 2011, 16:55 IST

ಕೊಟ್ಟೂರು: ‘ಕೊಟ್ಟೂರೇಶ್ವರನಿಗೆ ಜಯವಾಗಲಿ, ಕೊಟ್ಟೂರೇಶ್ವರನಿಗೆ ಜೈ....‘ ಎಂಬ ಭಕ್ತರ ಒಕ್ಕೂರಲಿನ ಜಯಘೋಷಗಳ ಮಧ್ಯೆ ಶನಿವಾರ ಸಂಜೆ ಇಲ್ಲಿ ಕೊಟ್ಟೂರೇಶ್ವರ ರಥೋತ್ಸವ ವಿಜೃಂಭಣೆಯಿಂದ ನಡೆಯಿತು. ಈ ರಥೋತ್ಸವಕ್ಕೆ ಜನಸಾಗರವೇ ಹರಿದು ಬಂದಿತ್ತು.

ಮೂಲಾ ನಕ್ಷತ್ರ ಕೂಡಿ ಬರುತ್ತಿದ್ದಂತೆಯೇ ಹೀರೆಮಠದಿಂದ ವಿವಿಧ ವಾದ್ಯಗಳೊಂದಿಗವೆ ಪಲ್ಲಕ್ಕಿಯಲ್ಲಿ ಶ್ರೀಸ್ವಾಮಿ ಆಗಮಿಸಿ, ಹರಿಜನ ಹಿರೇಮನೆ ಕರಿಯಮ್ಮ ಮತ್ತು ಉಡಿಸಲಮ್ಮ ಅವರು ಆರತಿ ಬೆಳಗಿದ ನಂತರ ರಥದತ್ತ ಸಾಗಿತು.
ಶ್ರೀಸ್ವಾಮಿ ರಥವೇರಿ ಮುಂದೆ ಸಾಗಿದಾಗ ಐದು ಗಂಟೆಯಾಗಿತ್ತು. ಲಕ್ಷಾಂತರ ಭಕ್ತರು ಭಕ್ತಿಯಿಂದ ಬಾಳೆಹಣ್ಣಗಳನ್ನು ರಥದತ್ತ ಎಸೆದು ಹರಕೆ ಸಲ್ಲಿಸಿದರು.

ದಾವಣಗೆರೆ, ಚಿತ್ರದುರ್ಗ, ಶಿವಮೊಗ್ಗ, ರಾಣಿಬೆನ್ನೂರು, ಬ್ಯಾಡಗಿ, ಹಾಸನ, ಧಾರವಾಡದಿಂದ ಪಾದಯಾತ್ರಿಗಳು ಆಗಮಿಸಿದ್ದರೆ, ಮಧ್ಯ ಕರ್ನಾಟಕದ ಇತರೆ ಜಿಲ್ಲೆಗಳಿಂದಲೂ ಭಕ್ತರು ಆಗಮಿಸಿ ಸ್ವಾಮಿಯ ದರ್ಶನ ಪಡೆದರು.
ನಿರೀಕ್ಷೆ ಮೀರಿ ಪಾದಯಾತ್ರಿಗಳು ಮತ್ತು ಭಕ್ತರು ರಥೋತ್ಸವಕ್ಕೆ ಆಗಮಿಸಿದ್ದರಿಂದ ಇಡೀ ಕೊಟ್ಟೂರು ಪಟ್ಟಣ ಜನರಿಂದ ಗಿಜಿಗುಡುತ್ತಿತ್ತು.

ಹುಬ್ಬಳಿಯ ಬಸವರಾಜ ಶಿರಗುಪ್ಪಿ ಮತ್ತು ದೇವದಾಸ ಖೈರಮೊಡೆ ಸಿದ್ಧಪಡಿಸಿದ್ದ ರುದ್ರಾಕ್ಷಿ ಮಾಲೆ ಮತ್ತು ಹಗರಿಬೊಮ್ಮನಹಳ್ಳಿಯ ಕೆ.ಎಂ. ಶಂಕ್ರಯ್ಯ ಸಿದ್ಧಪಡಿಸಿದ್ದ ಮಾಲೆಯನ್ನು ರಥಕ್ಕೆ ಅರ್ಪಿಸಲಾಯಿತು.

ತಾಂತ್ರಿಕ ಕಾರಣದಿಂದಾಗಿ ನಿಗದಿತ ಸಮಯಕ್ಕಿಂತ ಸ್ವಲ್ಪ ತಡವಾಗಿಯೇ ರಥೋತ್ಸವ ನಡೆಯಿತು. ರಥೋತ್ಸವ ಶಾಂತಿಯುತವಾಗಿತ್ತು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.