ADVERTISEMENT

ಕೋಮು ಗಲಭೆ ನಿಯಂತ್ರಣ ಕಾಯ್ದೆಗೆ ವಿರೋಧ

​ಪ್ರಜಾವಾಣಿ ವಾರ್ತೆ
Published 15 ಅಕ್ಟೋಬರ್ 2011, 19:30 IST
Last Updated 15 ಅಕ್ಟೋಬರ್ 2011, 19:30 IST

ಮಡಿಕೇರಿ: ಹಿಂದೂಗಳಿಗೆ ಮಾರಕವಾಗಲಿರುವ `ಕೋಮು ಗಲಭೆ ನಿಯಂತ್ರಣ ಕಾಯ್ದೆ~ಯನ್ನು ಜಾರಿಗೆ ತರಲು ಹೊರಟಿರುವ ಕೇಂದ್ರ ಸರ್ಕಾರದ ವಿರುದ್ಧ ಒಗ್ಗಟ್ಟಾಗಿ ಹೋರಾಡಬೇಕಾಗಿದೆ ಎಂದು ಪುತ್ತೂರು ಜಿಲ್ಲೆಯ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕಾರ್ಯಕಾರಿಣಿ ಸದಸ್ಯ ಪ್ರಸಾದ್ ಕುಮಾರ್ ಕರೆ ನೀಡಿದರು.

ಮಡಿಕೇರಿಯಲ್ಲಿ ಶನಿವಾರ ನಡೆದ ಪ್ರಾಥಮಿಕ ಶಿಕ್ಷಾವರ್ಗ-2011ದ ಸಮಾರೋಪ ಸಮಾರಂಭದಲ್ಲಿ ಅವರು ಮುಖ್ಯ ಉಪನ್ಯಾಸಕರಾಗಿ ಮಾತನಾಡಿದರು.  ಈ ಕಾಯ್ದೆ ಏನಾದರೂ ಜಾರಿ ಬಂದರೆ ಹಿಂದೂ ರಾಷ್ಟ್ರವಾಗಿರುವ ಈ ದೇಶದಲ್ಲಿ ಹಿಂದೂ ಪರವಾಗಿ ಮಾತನಾಡುವುದು ಕಾನೂನು ಬಾಹಿರವಾಗುತ್ತದೆ. ಹಿಂದೂ ಪರವಾಗಿ ಮಾತನಾಡುವವರನ್ನು ಜೈಲಿಗೆ ಅಟ್ಟಲಾಗುತ್ತದೆ ಎಂದು ಖಾರವಾಗಿ ಹೇಳಿದರು.

ದೇಶದ ಸಂಸ್ಕೃತಿ, ಆಚಾರ-ವಿಚಾರಗಳ ಮೇಲೆ ಆಕ್ರಮಣ ನಡೆದಾಗ ಅದಕ್ಕೆ ತಡೆಯೊಡ್ಡುವುದಕ್ಕಾಗಿಯೇ ಆರ್‌ಎಸ್‌ಎಸ್ ಸಂಘಟನೆಯನ್ನು ಹೆಗ್ಗಡೆವಾರ್ ಅವರು 1925ರಲ್ಲಿ ನಾಗಪುರದಲ್ಲಿ ಹುಟ್ಟು ಹಾಕಿದರು. ಅಂದಿನ ಇಂದಿನವರೆಗೆ ಸಂಘಟನೆ ತನ್ನ ಉದ್ದೇಶವನ್ನು ಈಡೇರಿಸುವುದರಲ್ಲಿ ಕಾರ್ಯನಿರತವಾಗಿದೆ ಎಂದರು.

ಇಲ್ಲಿ ಒಂದು ವಾರ ನಡೆದ ಶಿಬಿರದಲ್ಲಿ ದೇಶದ ಸಂಸ್ಕೃತಿ, ರಕ್ಷಣೆ ಬಗ್ಗೆ ತರಬೇತಿ ಪಡೆದ ನೀವು ವಾಪಸ್ ಊರಿಗೆ ಹೋದಾಗ ನಿಮ್ಮ ಮೇಲೆ ಗೂಬೆ ಕೂರಿಸುವ ಜನ ಸಾಕಷ್ಟು ಇರುತ್ತಾರೆ. ಮೊದಲಿಗೆ ಬುದ್ಧಿಜೀವಿ ಎನಿಸಿಕೊಂಡವರು, ನಂತರ ಮೂಲಭೂತವಾದಿಗಳು ನಿಮ್ಮ ಮೇಲೆ ಕತ್ತಿ ಮಸೆಯುತ್ತಾರೆ. ಇದರ ಬಗ್ಗೆ ಎಚ್ಚರದಿಂದ ಇರಬೇಕು ಎಂದು ಅವರು ಕಿವಿಮಾತು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮೂರ್ನಾಡುವಿನ ದಂತ ವೈದ್ಯ, ಡಾ.ಮೇಚಿರ ಸುಭಾಷ್ ನಾಣಯ್ಯ ಮಾತನಾಡಿ, ದೃಢ ಸಮಾಜ ನಿರ್ಮಾಣ ಮಾಡುವಲ್ಲಿ ಆರ್‌ಎಸ್‌ಎಸ್ ಪಾತ್ರ ಪ್ರಮುಖವಾಗಿದೆ ಎಂದರು.
ಶಿಬಿರದ ಕುರಿತು ಶಿಬಿರಾಧಿಕಾರಿ ಬಲ್ಯಾಟಂಡ ಪಾರ್ಥ ಚಂಗಪ್ಪ ಮಾಹಿತಿ ನೀಡಿದರು. ಶಿಬಿರದಲ್ಲಿ ವಿದ್ಯಾರ್ಥಿಗಳು, ಕೃಷಿಕರು, ಉದ್ಯೋಗಿಗಳು ಸೇರಿದಂತೆ 170 ಮಂದಿ ಭಾಗವಹಿಸಿದ್ದರು ಎಂದರು. 

 ಇದಕ್ಕೂ ಮೊದಲು ಗಣವೇಷಧಾರಿ ಸ್ವಯಂ ಸೇವಕರಿಂದ ನಗರದ ಸರ್ಕಾರಿ ಪದವಿಪೂರ್ವ ಕಾಲೇಜು ಆವರಣದಿಂದ ಗಾಂಧಿ ಮೈದಾನದವರೆಗೆ ಪಥ ಸಂಚಲನ ನಡೆಯಿತು.


 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT