ಕೋಲಾರ: ಕಳೆದ 10 ದಿನದಿಂದ ನೀರು ಪೂರೈಕೆಯಾಗಿಲ್ಲ ಎಂದು ಆರೋಪಿಸಿ ನಗರದ 3-4ನೇ ವಾರ್ಡ್ ನಿವಾಸಿಗಳು ಕೋಟೆ ಸೋಮೇಶ್ವರ ದೇಗುಲ ಮುಂಭಾಗ ಸೋಮವಾರ ಖಾಲಿ ಬಿಂದಿಗೆ ಪ್ರದರ್ಶಿಸಿ ಧರಣಿ ನಡೆಸಿದರು.
ಕೋಟೆಯ ಶ್ರೀಕಂಠೇಶ್ವರ ಬಾವಿ ಬಳಿ ಹತ್ತಾರು ವರ್ಷಗಳಿಂದ ನೂರಾರು ಮಂದಿಗೆ ನೀರು ಪೂರೈಸುತ್ತಿದ್ದ ಕೊಳವೆಬಾವಿ ಹಲವು ದಿನಗಳ ಹಿಂದೆ ಕೆಟ್ಟಿದೆ. ಆದರೆ ಅದನ್ನು ಸರಿಪಡಿಸುವ ಕೆಲಸ ನಡೆದಿಲ್ಲ. ಇದರಿಂದಾಗಿ ನೀರಿನ ಸಮಸ್ಯೆ ಎದುರಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಕಳೆದ 10 ದಿನದಿಂದ ನಗರಸಭೆ ನೀರು ಪೂರೈಸಿಲ್ಲ. ನಗರಸಭೆ ಆಯುಕ್ತೆ ಆರ್.ಶಾಲಿನಿ ಮತ್ತು 3ನೇ ವಾರ್ಡಿನ ಸದಸ್ಯ ಸೋಮಶೇಖರ್ ಅವರ ನಡುವೆ ಕೆಲವು ದಿನಗಳ ಹಿಂದೆ ನಡೆದ ವಾಗ್ವಾದ, ಜಗಳದ ಪರಿಣಾಮವಾಗಿ ನಿವಾಸಿಗಳು ಸಮಸ್ಯೆಯಲ್ಲಿ ಸಿಲುಕುವಂತಾಗಿದೆ. ವಾಗ್ವಾದದಿಂದ ಅಸಮಾಧಾನಗೊಂಡಿರುವ ಆಯುಕ್ತೆ ಮತ್ತು ನಗರಸಭೆ ಸಿಬ್ಬಂದಿ ಸಮಸ್ಯೆ ನಿವಾರಣೆ ವಿಷಯದಲ್ಲಿ ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಆರೋಪಿಸಿದರು.
ದೇವಾಲಯ ಮುಂಭಾಗದಲ್ಲಿ ರಸ್ತೆಗೆ ಅಡ್ಡವಾಗಿ ಕುರ್ಚಿಗಳನ್ನು ಜೋಡಿಸಿ ನಡೆಸಿದ ಧರಣಿಯಲ್ಲಿ ಹೆಚ್ಚು ವೃದ್ಧರು ಪಾಲ್ಗೊಂಡು ಗಮನ ಸೆಳೆದರು. ಬೆಳಿಗ್ಗೆ 8ರ ವೇಳೆಗೆ ಆರಂಭವಾದ ಧರಣಿ 10 ಗಂಟೆ ಮೀರಿದರೂ ನಡೆದಿತ್ತು. ಬಿಸಿಲು ಲೆಕ್ಕಿಸದೆ ನಿವಾಸಿಗಳು ಧರಣಿಯಲ್ಲಿ ಪಾಲ್ಗೊಂಡರು. ಸ್ಥಳೀಯರಾದ ರಜಾಕ್, ನಸೀರ್, ಮುಕರಂ, ಶೇಖರ್, ಅನ್ವರ್, ಬಿ.ಕುಮಾರ್, ಹಾಬಿ ರಮೇಶ್ ನೇತೃತ್ವ ವಹಿಸಿದ್ದರು.
ಅಧಿಕಾರ ನೀಡಿ: ಗ್ರಾ.ಪಂ. ಸದಸ್ಯೆಯರ ಮನವಿ
ಮಧುಗಿರಿ ವರದಿ: ಗ್ರಾಮ ಪಂಚಾಯಿತಿಗಳಿಗೆ ಹೆಚ್ಚಿನ ಅಧಿಕಾರ ನೀಡಬೇಕು. ಆಡಳಿತದಲ್ಲಿ ಸುಧಾರಣೆ ತರಬೇಕು ಎಂದು ಒತ್ತಾಯಿಸಿ ಗ್ರಾಮ ಪಂಚಾಯಿತಿ ಚುನಾಯಿತ ಮಹಿಳಾ ಪ್ರತಿನಿಧಿಗಳ ಸೋಮವಾರ ಉಪವಿಭಾಗಧಿಕಾರಿಗೆ ಮನವಿ ಸಲ್ಲಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.