ADVERTISEMENT

ಕೋಲಾರ: ಸಮಾಧಾನದ ಸಂಕ್ರಾಂತಿ

​ಪ್ರಜಾವಾಣಿ ವಾರ್ತೆ
Published 14 ಜನವರಿ 2012, 19:30 IST
Last Updated 14 ಜನವರಿ 2012, 19:30 IST

ಕೋಲಾರ: ಸ್ಥಳೀಯ ಸಂಸ್ಥೆಗಳ ಉಪ ಚುನಾವಣೆ ಕಾವು ಇಳಿದ ಬಳಿಕ ಸಂಕ್ರಾಂತಿ ಹಬ್ಬ ಎದುರಾಗಿದೆ. ಕಳೆದ ಎರಡು ವರ್ಷಗಳಿಗೆ ಹೋಲಿಸಿದರೆ ಈ ಬಾರಿಯ ಸಂಕ್ರಾಂತಿ ಜಿಲ್ಲೆಯ ರೈತರಿಗೆ ಸಮಾಧಾನ ತಂದಿದೆ.

ಎರಡು ವರ್ಷದಿಂದ ಅಕಾಲಿಕ ಮಳೆ ಪರಿಣಾಮ ನಲುಗಿದ್ದ ರೈತರಿಗೆ ಈ ಬಾರಿಯೂ ಮುಂಗಾರು ಅಸಮರ್ಪಕವಾಗಿ ಸುರಿದು ಆತಂಕ ಮೂಡಿಸಿತ್ತು. ಆದರೆ ಅಂಥ ಸನ್ನಿವೇಶದಲ್ಲೂ ರಾಗಿ ರೈತರನ್ನು ಕೈ ಹಿಡಿದಿದೆ. ಸಮೃದ್ಧ ಇಳುವರಿಯೂ ದೊರಕಿದೆ.

ತಡವಾಗಿ ಬಿತ್ತನೆ ಮಾಡಿದವರಿಗೂ ನಷ್ಟವಾಗಿಲ್ಲ. ನೆಲಗಡಲೆ ಬೆಳೆದವರಿಗೂ ನಷ್ಟವಾಗಿಲ್ಲ. ಅಂಗಮಾರಿಯ ಆತಂಕ ಎದುರಿಸಿದ್ದ ಆಲೂಗಡ್ಡೆ ಬೆಳೆಯೂ ಕಾಪಾಡಿದೆ ಎಂಬುದು ಹಲವು ರೈತರ ಅಭಿಪ್ರಾಯ.

ಅಂತರ್ಜಲ ಮಟ್ಟ ಕುಸಿದಿರುವುದು ಮತ್ತು ಸಮರ್ಪಕ ಬೆಲೆ ದೊರಕದಿರುವುದರ ನಡುವೆಯೂ ರೈತರಲ್ಲಿ ಆಶಾವಾದ ಕಡಿಮೆಯಾಗಿಲ್ಲ. ಟ್ಯಾಂಕರ್‌ಗಳ ಮೂಲಕ ಟೊಮೆಟೊ ತೋಟಗಳಿಗೆ ನೀರು ಹರಿಸಿ ಕೆಲವರು ತೋಟಗಾರಿಕೆ ಕೃಷಿ ನಡೆಸಿದ್ದಾರೆ.

ದುಬಾರಿ: ಈ ಬಾರಿ ಹಬ್ಬದ ಸಾಮಗ್ರಿ ದುಬಾರಿಯಾಗಿವೆ. ನಗರ, ಪಟ್ಟಣಗಳ ಮಾರುಕಟ್ಟೆಗಳಲ್ಲಿ ಕಬ್ಬು, ನೆಲಗಡಲೆ, ಅವರೆಕಾಯಿ ಹಾಗೂ ಸಿದ್ಧಪಡಿಸಿದ ಎಳ್ಳು-ಬೆಲ್ಲದ ಪ್ಯಾಕೆಟ್‌ಗಳ ಮಾರಾಟ ಶನಿವಾರ ಭರದಿಂದ ನಡೆದಿತ್ತು.

ಒಂದು ಜಲ್ಲೆ ಕಬ್ಬಿಗೆ 20ರಿಂದ 25 ರೂಪಾಯಿ. ಅವರೆಕಾಯಿ ಕೆ.ಜಿ.ಗೆ 20-25, ಗೆಣಸು ಕೆ.ಜಿ.ಗೆ 20, ನೆಲಗಡಲೆ ಲೀಟರ್‌ಗೆ 30, ಎಳ್ಳು-ಬೆಲ್ಲ ಕೆ.ಜಿ.ಗೆ 100 ರೂಪಾಯಿ. ಚೆಂಡು ಹೂವು ಕೆ.ಜಿ.ಗೆ 50 ರೂಪಾಯಿ, ಬಾಳೆ ಹಣ್ಣು 25-30 ರೂಪಾಯಿ ಇತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.