ADVERTISEMENT

ಕ್ರಿಯಾತ್ಮಕತೆಗೆ ಕ್ರೀಡೆ ಸಹಕಾರಿ

​ಪ್ರಜಾವಾಣಿ ವಾರ್ತೆ
Published 4 ಮಾರ್ಚ್ 2011, 19:30 IST
Last Updated 4 ಮಾರ್ಚ್ 2011, 19:30 IST

ಶಿವಮೊಗ್ಗ: ವಿದ್ಯುತ್ ಸರಬರಾಜು ಕಂಪೆನಿಗಳಿಗೆ ಗ್ರಾಹಕರ ಸೇವೆಯೇ ಮುಖ್ಯ. ಇದಕ್ಕೆ ಸಿಬ್ಬಂದಿಯಲ್ಲಿ ಕ್ರಿಯಾತ್ಮಕತೆ ಇರಬೇಕು. ಈ ನಿಟ್ಟಿನಲ್ಲಿ ಕ್ರೀಡೆ ಸಹಕಾರಿಯಾಗಿದೆ ಎಂದು ಕರ್ನಾಟಕ ವಿದ್ಯುತ್ ಪ್ರಸರಣ ನಿಗಮದ ಕ್ರೀಡಾ ಸಂಸ್ಥೆ ಕ್ರೀಡಾಧಿಕಾರಿ ಜಿ.ಎಸ್. ಆನಂದಕೃಷ್ಣ ಅಭಿಪ್ರಾಯಪಟ್ಟರು.

ನಗರದ ನೆಹರು ಕ್ರೀಡಾಂಗಣದಲ್ಲಿ ಶುಕ್ರವಾರ ಮಂಗಳೂರು ವಿದ್ಯುಚ್ಛಕ್ತಿ ಸರಬರಾಜು ಕಂಪೆನಿ ನಿಯಮಿತ (ಮೆಸ್ಕಾಂ) ಹಮ್ಮಿಕೊಂಡಿದ್ದ 2010-11ನೇ ಸಾಲಿನ ರಾಜ್ಯಮಟ್ಟದ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ಮತ್ತು ವಿತರಣಾ ಕಂಪೆನಿಗಳ ಕ್ರೀಡಾಕೂಟದಲ್ಲಿ ಅವರು ಮಾತನಾಡಿದರು.

ಕ್ರೀಡೆ ವ್ಯಕ್ತಿಯಲ್ಲಿ ಕ್ರಿಯಾತ್ಮಕತೆ ಬೆಳೆಸುತ್ತದೆ. ಜತೆಗೆ ಸಕಾರಾತ್ಮಕ ಯೋಚನೆಗಳು ಬರುತ್ತವೆ. ಈ ಹಿನ್ನೆಲೆಯಲ್ಲಿ ಯಾವಾಗಲೂ ಒತ್ತಡದಲ್ಲಿ ಕಾರ್ಯನಿರ್ವಹಿಸುವ ವಿದ್ಯುತ್ ಸರಬರಾಜು ಕಂಪೆನಿಗಳ ಸಿಬ್ಬಂದಿಗೆ ಕ್ರೀಡೆ ಅತ್ಯವಶ್ಯಕ ಎಂದರು.

ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿದ ಮೆಸ್ಕಾಂ (ತಾಂತ್ರಿಕ) ನಿರ್ದೇಶಕ ಕೆ. ರಾಮಕೃಷ್ಣ, ಕ್ರೀಡಾಕೂಟಗಳು ಮನುಷ್ಯನಲ್ಲಿ ಸ್ಫೂರ್ತಿಯನ್ನು ತುಂಬುತ್ತವೆ. ಸೌಹಾರ್ದಯುತವಾಗಿ ಬದುಕುವುದನ್ನು ಕಲಿಸುತ್ತವೆ ಎಂದು ತಿಳಿಸಿದರು.
ನಿಗಮದ ನೌಕರರ ಸಂಘದ ಅಧ್ಯಕ್ಷ ಪಿ.ಜಿ. ಅಮ್ಮಿನಭಾವಿ ಮಾತನಾಡಿ, ಪ್ರತಿಭೆ ಅಭಿವ್ಯಕ್ತಗೊಳಿಸಲು ಕ್ರೀಡಾಕೂಟ ಸೂಕ್ತ ವೇದಿಕೆ ಎಂದು ಅಭಿಪ್ರಾಯಪಟ್ಟರು.

ಮೆಸ್ಕಾಂ ನಿರ್ದೇಶಕ ಜಿ.ಕೆ. ಷಡಾಕ್ಷರಪ್ಪ, ಅಧೀಕ್ಷಕ ಎಂಜಿನಿಯರ್ ಎಸ್. ಚಂದ್ರಶೇಖರ್, ಕ.ವಿ.ಪ್ರ.ನಿ.ನಿ ಅಧೀಕ್ಷಕ ಎಂಜಿನಿಯರ್ ಎನ್. ನಾಗರಾಜ್, ಅಧಿಕಾರಿಗಳಾದ ಹಾಲಪ್ಪ, ಶ್ರೀಧರ್, ಗಣಪತಿಯಪ್ಪ, ನಾಗೋಜಿರಾವ್, ವೆಂಕಟೇಶಪ್ರಸಾದ್, ಮಹ್ಮದ್ ಶಫಿವುಲ್ಲಾ, ಸುಜಾತಾ ಮತ್ತಿತರರು ಉಪಸ್ಥಿತರಿದ್ದರು.

ಮೆಸ್ಕಾಂ ಮುಖ್ಯ ಎಂಜಿನಿಯರ್ ಎಂ. ಮಹಾದೇವ ಅಧ್ಯಕ್ಷತೆ ವಹಿಸಿದ್ದರು. ಸುನಂದಾ ಮತ್ತು ಸುಶೀಲಾ ಪ್ರಾರ್ಥಿಸಿದರು. ಗುಲ್ಬರ್ಗ, ಹುಬ್ಬಳ್ಳಿ, ಬೆಂಗಳೂರು ಸೇರಿದಂತೆ ವಿವಿಧ ಕಂಪೆನಿಗಳ ಕ್ರೀಡಾಪಟುಗಳು ಪಾಲ್ಗೊಂಡಿದ್ದರು.


 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT