ADVERTISEMENT

ಕ್ಷಯ ರೋಗ ನಿವಾರಣೆಗೆ ಪಣ ತೊಡಿ

​ಪ್ರಜಾವಾಣಿ ವಾರ್ತೆ
Published 24 ಮಾರ್ಚ್ 2011, 19:30 IST
Last Updated 24 ಮಾರ್ಚ್ 2011, 19:30 IST

ಚಿಕ್ಕಬಳ್ಳಾಪುರ: ಎಲ್ಲೆಡೆ ತೀವ್ರವಾಗಿ ಹರಡುತ್ತಿರುವ ಕ್ಷಯರೋಗವನ್ನು ತಡೆಗಟ್ಟುವ ನಿಟ್ಟಿನಲ್ಲಿ ಪ್ರತಿಯೊಬ್ಬರು ಜಾಗೃತರಾಗಬೇಕು. ಕ್ಷಯ ರೋಗ ನಿವಾರಣೆಗೆ ಪಣ ತೊಡಬೇಕು ಎಂದು ಜಿಲ್ಲಾ ಮತ್ತು ಆರೋಗ್ಯ ಕುಟುಂಬ ಕಲ್ಯಾಣಾಧಿಕಾರಿ ಡಾ.ಬಿ.ಎನ್.ಬೈರಾರೆಡ್ಡಿ ತಿಳಿಸಿದರು. ವಿಶ್ವ ಕ್ಷಯ ರೋಗ ದಿನಾಚರಣೆ ಪ್ರಯುಕ್ತ ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಆವರಣದಲ್ಲಿ ಗುರುವಾರ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಮಾತನಾಡಿ, ‘ಕ್ಷಯ ರೋಗ ತೀವ್ರಸ್ವರೂಪ ಪಡೆದಕೊಳ್ಳದಂತೆ ಆರಂಭಿಕ ಹಂತದಲ್ಲೇ ತಡೆಗಟ್ಟಬಹುದು’ ಎಂದರು.

ಮೂರು ವಾರಗಳಿಗೂ ಹೆಚ್ಚು ಕಾಲ ಕೆಮ್ಮು ಕಾಣಿಸಿಕೊಂಡಲ್ಲಿ, ಎದೆಯಲ್ಲಿ ಪದೇ ಪದೇ ನೋವು, ನಿಶ್ಯಕ್ತಿ, ಜ್ವರದಿಂದ ಬಳಲುವುದು ಮುಂತಾದ ಲಕ್ಷಣಗಳು ಕಾಣಿಸಿಕೊಂಡರೆ ತಕ್ಷಣವೇ ಆರೋಗ್ಯ ಪರೀಕ್ಷಿಸಬೇಕು. ವೈದ್ಯರು ನೀಡುವ ಗುಳಿಗೆ, ಔಷಧಿಗಳನ್ನು ತಪ್ಪದೇ ಸೇವಿಸಬೇಕು ಎಂದು ಸಲಹೆ ಮಾಡಿದರು. ಕ್ಷಯ ರೋಗದ ಬಗ್ಗೆ ಗ್ರಾಮಸ್ಥರಲ್ಲಿ ಜಾಗೃತಿ ಮೂಡಿಸಲು ಯತ್ನಿಸಿದ ಆರೋಗ್ಯ ಇಲಾಖೆಯ ಸಿಬ್ಬಂದಿಗಳಿಗೆ ಸನ್ಮಾನಿಸಲಾಯಿತು. ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬಿ.ಎಸ್.ಶೇಖರಪ್ಪ, ಜಿಲ್ಲಾ ಕ್ಷಯ ರೋಗ ನಿಯಂತ್ರಣಾಧಿಕಾರಿ ಡಾ.ಕೆ.ಬಾಬುರೆಡ್ಡಿ, ಕಾಲೇಜು ಸಹಾಯಕ ಪ್ರಾಂಶುಪಾಲ ಪ್ರೊ. ಹಫೀಜ್‌ಉಲ್ಲಾ, ಎನ್‌ಎಸ್‌ಎಸ್-2ನೇ ಘಟಕದ ಕಾರ್ಯಕ್ರಮ ಅಧಿಕಾರಿ ಪ್ರೊ. ವೆಂಕಟರಾಮು ಮತ್ತಿತರರು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.