ಚಿಕ್ಕಮಗಳೂರು: ಜೇಬಿನಲ್ಲಿದ್ದ ಗಂಧಕದ ಪುಡಿಯ ಪೊಟ್ಟಣ ಆಕಸ್ಮಿಕವಾಗಿ ಸ್ಫೋಟಿಸಿ ರೈತರೊಬ್ಬರು ತೀವ್ರವಾಗಿ ಗಾಯಗೊಂಡ ಘಟನೆ ನಗರದಲ್ಲಿ ಶನಿವಾರ ನಡೆದಿದೆ. ಪಕ್ಕದಲ್ಲಿದ್ದ ವಬಾಲಕನಿಗೂ ಸ್ಫೋಟದಲ್ಲಿ ಸಣ್ಣ ಗಾಯಗಳಾಗಿವೆ.
ಮೂಕ್ತಿಹಳ್ಳಿ ಸಮೀಪದ ದುಮ್ಮಗೆರೆ ಲಕ್ಷ್ಮಯ್ಯ ತೀವ್ರವಾಗಿ ಗಾಯಗೊಂಡಿದ್ದಾರೆ. ಜಮೀನಿಗೆ ದಾಳಿ ಇಡುತ್ತಿದ್ದ ಕೋತಿಗಳನ್ನು ಬೆದರಿಸಲು ನಗರದಲ್ಲಿ ಗಂಧಕ ಪುಡಿ ಖರೀದಿಸಿದ ಲಕ್ಷ್ಮಯ್ಯ ಪೊಟ್ಟಣವನ್ನು ಪ್ಯಾಂಟಿನ ಜೇಬಿನಲ್ಲಿಟ್ಟುಕೊಂಡಿದ್ದರು. ಜತೆಗಿದ್ದ ಅನಾರೋಗ್ಯಪೀಡಿತ ಪತ್ನಿಯನ್ನು ವೈದ್ಯರ ಬಳಿಗೆ ಕರೆದೊಯ್ದಿದ್ದರು.
ಕ್ಲಿನಿಕ್‌ನಲ್ಲಿ ಸರದಿಗಾಗಿ ಕಾಯುತ್ತಿದ್ದಾಗ ಕಿಸೆಯಲ್ಲಿದ್ದ ಗಂಧಕ ಸ್ಫೋಟಿಸಿತು. ಲಕ್ಷ್ಮಯ್ಯ ಅವರ ಪ್ಯಾಂಟ್‌ಗೆ ಬೆಂಕಿ ಹೊತ್ತಿಕೊಂಡು ಸೊಂಟ, ತೊಡೆ, ಕೈಗಳಿಗೆ ಸುಟ್ಟ ಗಾಯವಾಗಿದೆ. ಪಕ್ಕದಲ್ಲೇ ಕುಳಿತಿದ್ದ ಬಾಲಕನಿಗೂ ಸುಟ್ಟ ಗಾಯಗಳಾಗಿವೆ.
ಗಂಧಕ ದಿಢೀರ್ ಸ್ಫೋಟಿದ್ದರಿಂದ ಉಂಟಾದ ಸದ್ದು ಮತ್ತು ಹೊಗೆಯಿಂದಾಗಿ ಕ್ಲಿನಿಕ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದವರು ಭೀತಿಗೊಂಡು ದಿಕ್ಕಾಪಾಲಾಗಿ ಓಡಿದರು. ಒಳಗೆ ಮಂಚದ ಮೇಲೆ ಮಲಗಿದ್ದ ರೋಗಿಗಳೂ ಗ್ಲೂಕೋಸ್ ಪೈಪ್ ಕಿತ್ತೆಸೆದು ಹೊರಗೋಡಿದರು. ಘಟನೆಯಿಂದ ಆಘಾತಕ್ಕೊಳಗಾದ ವೈದ್ಯರೂ ಸುಧಾರಿಸಿಕೊಳ್ಳಲು 5-10 ನಿಮಿಷ ಬೇಕಾಯಿತು ಎಂದು ಪ್ರತ್ಯಕ್ಷದರ್ಶಿಗಳು `ಪ್ರಜಾವಾಣಿ~ಗೆ ತಿಳಿಸಿದ್ದಾರೆ.
ದೊಡ್ಡ ಬಾಂಬ್ ಸ್ಫೋಟಿಸಿದೆ ಎಂದೇ ಭಾವಿಸಿದ ಪಕ್ಕದ ಅಂಗಡಿಗಳವರು, ದಾರಿಹೋಕರು ಸ್ಥಳದಲ್ಲಿ ಜಮಾಯಿಸಿದರು. ಸುದ್ದಿ ತಿಳಿದ ತಕ್ಷಣ ಸ್ಥಳಕ್ಕೆ ನಗರ ಠಾಣೆ ಪೊಲೀಸರು, ಅಗ್ನಿಶಾಮಕ ಮತ್ತು ತುರ್ತು ಸೇವೆ ಸಿಬ್ಬಂದಿ, ಆಂಬುಲೆನ್ಸ್ ಧಾವಿಸಿದವು. ಪೊಲೀಸರು ಪರಿಸ್ಥಿತಿ ತಿಳಿಗೊಳಿಸಿ ಗಾಯಾಳುಗಳಿಬ್ಬರನ್ನೂ ಜಿಲ್ಲಾಸ್ಪತ್ರೆಗೆ ಕರೆದೊಯ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.