ADVERTISEMENT

ಗಮನ ಸೆಳೆದ ಧರ್ಮ ಜಾಗೃತಿ ಸಮಾವೇಶ

​ಪ್ರಜಾವಾಣಿ ವಾರ್ತೆ
Published 7 ಮೇ 2012, 19:30 IST
Last Updated 7 ಮೇ 2012, 19:30 IST
ಗಮನ ಸೆಳೆದ ಧರ್ಮ ಜಾಗೃತಿ ಸಮಾವೇಶ
ಗಮನ ಸೆಳೆದ ಧರ್ಮ ಜಾಗೃತಿ ಸಮಾವೇಶ   

ತುಮಕೂರು: ನಗರದಲ್ಲಿ ಸೋಮವಾರ ಉಜ್ಜಯಿನಿ ಸದ್ಧರ್ಮ ಪೀಠದ ಸಿದ್ದಲಿಂಗರಾಜದೇಶಿಕೇಂದ್ರ ಶಿವಾಚಾರ್ಯ ಸ್ವಾಮೀಜಿ ಹಾಗೂ ಶ್ರೀಶೈಲ ಪೀಠದ ಗಿರಿರಾಜ ಸೂರ್ಯ ಸಿಂಹಾಸನಾಧೀಶ್ವರ ಡಾ.ಚನ್ನಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಅವರ ಅಡ್ಡಪಲ್ಲಕ್ಕಿ ಉತ್ಸವ ಮತ್ತು ಧರ್ಮ ಜಾಗೃತಿ ಸಭೆ ನಡೆಯಿತು.

ನಾದಸ್ವರ, ನಂದಿಧ್ವಜ, ವೀರಗಾಸೆ, ಕರಡಿವಾದ್ಯ ಹಾಗೂ ಜಾನಪದ ಕಲಾತಂಡದೊಂದಿಗೆ ಶಿರಾರಸ್ತೆಯ ಕೋಡಿ ಬಸವೇಶ್ವರ ದೇಗುಲದಿಂದ ಹೊರಟ ಉತ್ಸವ ಚಿಕ್ಕಪೇಟೆ, ಮಂಡಿಪೇಟೆ, ಚರ್ಚ್‌ವೃತ್ತ, ಅಶೋಕ ರಸ್ತೆ ಮಾರ್ಗವಾಗಿ ರೇಣುಕ ವಿದ್ಯಾಪೀಠ ಸೇರಿತು. ಸಂಜೆ ನಡೆದ ಧರ್ಮ ಜಾಗೃತಿ ಸಭೆಯಲ್ಲಿ ಮಾತನಾಡಿದ ಎಡೆಯೂರು ಕ್ಷೇತ್ರದ ರಂಭಾಪುರಿ ಶಾಖಾಮಠದ ರೇಣುಕ ಶಿವಾಚಾರ್ಯ ಸ್ವಾಮೀಜಿ, ವೀರಶೈವ ಧರ್ಮವು ಕೃತಯುಗದಿಂದ ಅಸ್ತಿತ್ವದಲ್ಲಿದೆ. ಪಂಚಪೀಠಗಳಿಗೂ ಪಂಚಭೂತಗಳಿಗೂ ಸಂಬಂಧವಿದೆ ಎಂದು ವಿಶ್ಲೇಷಿಸಿದರು.

ರೇಣುಕರು ಪ್ರಾರಂಭಿಸಿದ ವೀರಶೈವ ಧರ್ಮವನ್ನು ಬಸವಾದಿಗಳು ಪ್ರವರ್ಧಮಾನಕ್ಕೆ ತಂದರು. ಸಿದ್ದಲಿಂಗೇಶ್ವರರು ವೀರಶೈವ ಧರ್ಮವನ್ನು ಪುನರುತ್ಥಾನ ಮಾಡಿದರು. ವೀರಶೈವ ಸಮುದಾಯ ಎಂಬ ಒಂದೇ ವೃಕ್ಷದ ವಿವಿಧ ರೆಂಬೆಗಳನ್ನು ಪ್ರತ್ಯೇಕವಾಗಿ ನೋಡುವ ದೃಷ್ಟಿಕೋನ ಈಚೆಗೆ ಬೆಳೆಯುತ್ತಿದೆ. ಇದು ತಪ್ಪು ಎಂದು ಕಿವಿಮಾತು ಹೇಳಿದರು.

ಉಜ್ಜಯಿನಿ ಪೀಠದ ಸಿದ್ದಲಿಂಗರಾಜದೇಶಿಕೇಂದ್ರ ಸ್ವಾಮೀಜಿ, ಶ್ರೀಶೈಲ ಪೀಠದ ಡಾ.ಚೆನ್ನಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ, ಸಿದ್ದರಬೆಟ್ಟದ ವೀರಭದ್ರ ಶಿವಾಚಾರ್ಯ ಸ್ವಾಮೀಜಿ, ಸಿಐಟಿ ಶಿಕ್ಷಣ ಸಂಸ್ಥೆಯ ಜ್ಯೋತಿ ಗಣೇಶ್, ಮಾಜಿ ಶಾಸಕ ಸಿ.ವೀರಭದ್ರಯ್ಯ, ವೀರಶೈವ ಸಮಾಜ ಸೇವಾ ಸಮಿತಿಯ ಜಿ.ಆರ್.ಶಿವಕುಮಾರ್, ಧಾನ್ಯ ವ್ಯಾಪಾರಿಗಳ ಸಂಘದ ಅಧ್ಯಕ್ಷ ಜಿ.ಎಚ್.ಪರಮಶಿವಯ್ಯ, ವೀರಶೈವ ಸಹಕಾರ ಬ್ಯಾಂಕ್ ಅಧ್ಯಕ್ಷ ಟಿ.ಎಸ್.ಶಿವಪ್ರಕಾಶ್ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.