ADVERTISEMENT

ಗಾಳಿಪಟ ಹಬ್ಬ: ಜನರ ಸಂಭ್ರಮ

​ಪ್ರಜಾವಾಣಿ ವಾರ್ತೆ
Published 14 ಜನವರಿ 2012, 19:30 IST
Last Updated 14 ಜನವರಿ 2012, 19:30 IST

ಹುಮನಾಬಾದ್: ನಗರದಲ್ಲಿ ಚಿಣ್ಣರು, ಹಿರಿಯರಿಗೆ ಮಾತ್ರ ಸೀಮಿತಗೊಂಡಿದ್ದ ಗಾಳಿಪಟ ಹಬ್ಬದಲ್ಲಿ ಈ ಬಾರಿ ಕ್ಷೇತ್ರದ ಶಾಸಕ ರಾಜಶೇಖರ ಪಾಟೀಲ ಕೂಡ ಗಾಳಿಪಟ ಹಾರಿಸುವ ಮೂಲಕ ಸ್ವತಃ ಸಂಭ್ರಮಿಸಿದ್ದು ಅಲ್ಲದೆ ಇತರರನ್ನೂ ಪ್ರೋತ್ಸಾಹಿಸಿದರು.

ಸಂಕ್ರಾಂತಿ ಹಬ್ಬ ಬಂತೆಂದರೆ ಸಾಕು, ಇಡೀ ರಾಜ್ಯದ ಗಮನ ಗಾಳಿಪಟ ಪರಂಪರೆ ಖ್ಯಾತಿಗೆ ಪಾತ್ರವಾದ ಹುಮನಾಬಾದ್ ಪಟ್ಟಣದ ಮೇಲಿರುತ್ತದೆ. ಈ ಭಾಗದ ವಿಶಿಷ್ಟ ಪರಂಪರೆಯಾದ ಈ ಹಬ್ಬದಲ್ಲಿ ಚಿಣ್ಣರು, ಯುವಕರು ಭಾಗವಹಿಸುತ್ತಿರುವುದು ಸಂತಸದ ಸಂಗತಿ. ಇದು ಇಷ್ಟಕ್ಕೆ ಸೀಮಿತಗೊಳ್ಳದೆ ಗಾಳಿಪಟ ಹಾರಿಸುವವರ ಸಂಖ್ಯೆ ಹೆಚ್ಚಬೇಕು. ಅದಕ್ಕೆ ಹಿಂದಿನಂತೆ ಹಿರಿಯರು ಕೂಡ ಸಾಥ್ ನೀಡಿ ಇದನ್ನು ಇನ್ನಷ್ಟು ಖ್ಯಾತಿಗೆ ತರಬೇಕು ಎಂದು ಶಾಸಕ ರಾಜಶೇಖರ ಪಾಟೀಲ ತಿಳಿಸಿದರು.

ದೇಸಿ ಗಾಳಿಪಟ ಮತ್ತು ಮಾಂಜಾ ದಾರ ತಯಾರಿಸುವ ವ್ಯಕ್ತಿಗಳನ್ನು ಮುಂದಿನ ದಿನಗಳಲ್ಲಿ ಪ್ರೋತ್ಸಾಹಿಸಲಾಗುವುದು ಎಂದು ಅವರು ತಿಳಿಸಿದರು.

ಜಿಲ್ಲಾ ಪಂಚಾಯಿತಿ ಸದಸ್ಯ ವೀರಣ್ಣ ಎಚ್.ಪಾಟೀಲ, ಜಿಲ್ಲಾ ಯುವ ಕಾಂಗ್ರೆಸ್ ಕಾರ್ಯದರ್ಶಿ ಡಾ.ಸಿದ್ದು ಪಾಟೀಲ, ಕಾಳಪ್ಪ ಪಾಟೀಲ, ಶಾಸಕರ  ಬೆಂಬಲಿಗರು, ಜೇರಪೇಟೆ ಓಣಿಯ ಯುವಕರು, ಚಿಣ್ಣರು ಇದ್ದರು.  

ಪಟ್ಟಣದ ಬಾಲಾಜಿ, ಅಗಡಿ, ಮಾಳಶೆಟ್ಟಿ, ಗಡ್ಡಲ್, ಸೀಗಿ, ವರನಾಳ್, ಪರಮಶೆಟ್ಟಿ, ಘವಾಳಕರ್, ಸಜ್ಜನಶೆಟ್ಟಿ, ಚಿದ್ರಿ, ಸತ್ತಾರಸಾಬ್, ಹೆಗ್ಗಣ್ಣಿ, ವಾಸಗಿ, ಜೇರಪೇಟೆಯ ಶರಣಪ್ಪಗೌಡ ಪಾಟೀಲ ಮೊದಲಾದವರ ಛಾವಣಿ ಮೇಲೆ ಶಾಮಿಯಾನ ಹಾಕಿ, ಧ್ವನಿವರ್ಧಕ ಅಳವಡಿಸಿ, ಹಲಗೆ ತಾಳಕ್ಕೆ ಕುಣಿಯುತ್ತ ಗಾಳಿಪಟ ಹಾರಿಸುತ್ತಿದ್ದ ದೃಶ್ಯ ಕಂಡುಬಂತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.