ಮಂಡ್ಯ: ನಿಗದಿತ ವೇಳೆಯಲ್ಲಿ ವೇತನ ಪಾವತಿಸಬೇಕು ಎಂಬುದು ಸೇರಿದಂತೆ ವಿವಿಧ ಬೇಡಿಕೆಗಳ ಬಗೆಗೆ ಸರ್ಕಾರದ ಗಮನ ಸೆಳೆಯುವ ಕ್ರಮವಾಗಿ ಗುತ್ತಿಗೆ ಪೌರ ಕಾರ್ಮಿಕರು ಮತ್ತು ಪೌರ ಸೇವಾ ನೌಕರರು ಬುಧವಾರ ಪತ್ರ ಚಳವಳಿ ನಡೆಸಿದರು.
ನಗರದಲ್ಲಿ ವಿಶ್ವೇಶ್ವರಯ್ಯ ರಸ್ತೆಯಲ್ಲಿನ ಮುಖ್ಯ ಅಂಚೆ ಕಚೇರಿಯ ಬಳಿ ಸೇರಿದ ಪೌರ ಕಾರ್ಮಿಕರು, ಆದ್ಯತೆಯ ಮೇರೆಗೆ ಈ ಸಮಸ್ಯೆಗಳನ್ನು ಗಮನಿಸಿ ಪರಿಹಾರವನ್ನು ಒದಗಿಸಬೇಕು ಎಂದು ಸರ್ಕಾರವನ್ನು ಒತ್ತಾಯಿಸಿ ಪತ್ರ ಬರೆಯುವ ಮೂಲಕ ವಿಭಿನ್ನವಾಗಿ ಪ್ರತಿಭಟನೆ ನಡೆಸಿದರು.
ನಗರಸಭೆಯ ವ್ಯಾಪ್ತಿಯಲ್ಲಿಯೇ ಸುಮಾರು 172ಕ್ಕೂ ಹೆಚ್ಚು ಗುತ್ತಿಗೆ ಪೌರ ಕಾರ್ಮಿಕರು ದುಡಿಯುತ್ತಿದ್ದಾರೆ. ವೇತನ ಪಾವತಿ ವಿಳಂಬವಾಗುತ್ತಿದ್ದು, ಒಮ್ಮಮ್ಮೆ ಎರಡು ತಿಂಗಳಾದರೂ ವೇತನ ಪಾವತಿ ಆಗುವುದಿಲ್ಲ. ವೇತನವನ್ನೇ ನಂಬಿರುವ ಪೌರ ಕಾರ್ಮಿಕರಿಗೆ ಇನ್ನಿಲ್ಲದ ಸಮಸ್ಯೆಯಾಗಿದೆ ಎಂದು ಸಮಸ್ಯೆ ತೋಡಿಕೊಂಡಿದ್ದಾರೆ.
ನಿಯಮಗಳ ಅನುಸಾರ ತಿಂಗಳ ಐದನೇ ತಾರೀಖಿನ ಒಳಗೆ ವೇತನ ಪಾವತಿಸಬೇಕು. ಗುತ್ತಿಗೆ ಪದ್ಧತಿಯನ್ನೇ ಕೈಬಿಟ್ಟು, ನಗರಸಭೆಯೇ ವೇತನ ಪಾವತಿಸುವಂತೆ, ಸೇವೆ ಕಾಯಂ ಮಾಡುವಂತೆ ಕ್ರಮ ಜರುಗಿಸಬೇಕು ಎಂದು ಆಗ್ರಹಪಡಿಸಿದ್ದಾರೆ.
ಬೇಡಿಕೆ ಕುರಿತು ಮಾರ್ಚ್‌ನಲ್ಲಿ ಎರಡು ಬಾರಿ ಪ್ರತಿಭಟಿಸಿದ್ದರೂ ಪ್ರಯೋಜನ ಆಗಿಲ್ಲ. ಇನ್ನಾದರೂ ಸರ್ಕಾರ ಈ ಬಗೆಗೆ ಗಮನಹರಿಸಿ ಕ್ರಮ ಕೈಗೊಳ್ಳಬೇಕಾಗಿದೆ ಎಂದು ಒತ್ತಾಯಿಸಿದ್ದಾರೆ.
ಈ ಕುರಿತು ಜಿಲ್ಲಾ ಘಟಕದ ಅಧ್ಯಕ್ಷ ಎನ್.ನಾಗರಾಜು ಅವರು ಹೇಳಿಕೆ ನೀಡಿದ್ದು, ವೇತನ ಸಮಸ್ಯೆ ಬಗೆಹರಿಸಲು ಆದ್ಯತೆ ನೀಡಬೇಕು ಎಂದು ಒತ್ತಾಯಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.