ಗುಲ್ಬರ್ಗ: `ಜೀವನದಲ್ಲಿ ಹಿಂತಿರುಗಿ ನೋಡಿದಾಗ ಜನರು ಒಂದಿಷ್ಟು ಗುರುತಿಸುವಂತಹ ಕೆಲಸ ಮಾಡಿರಬೇಕು ಎಂದು ಮಹಾತ್ಮರು ಹೇಳುತ್ತಾರೆ. ಮುಖ್ಯಮಂತ್ರಿಯಾಗಿ ಮೂರೂವರೆ ವರ್ಷದ ಅವಧಿಯಲ್ಲಿ ಖಂಡಿತವಾಗಿಯೂ ಗುರುತಿಸುವಂತಹ ಕೆಲಸ ಮಾಡಿದ್ದೇನೆ ಎನ್ನುವ ಸಂತೃಪ್ತಿ ನನ್ನಲ್ಲಿದೆ~ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸೋಮವಾರ ಇಲ್ಲಿ ಹೇಳಿದರು.
ಜೇವರ್ಗಿ ತಾಲ್ಲೂಕಿನ ನರಿಬೋಳ ಗ್ರಾಮದಲ್ಲಿ ವೀರಭದ್ರೇಶ್ವರ ಜಾತ್ರಾ ನಿಮಿತ್ತ ಆಯೋಜಿಸಿದ್ದ ಕಲ್ಯಾಣ ಮಂಟಪ ಉದ್ಘಾಟನೆ ಮತ್ತು 111 ಜೋಡಿಯ ಉಚಿತ ಸಾಮೂಹಿಕ ವಿವಾಹ ಸಮಾರಂಭದಲ್ಲಿ ಮಾತನಾಡಿದರು.
`ಬಡವರ ಅಭಿವೃದ್ಧಿಗಾಗಿ ಕೆಲಸ ಮಾಡಲು ಉನ್ನತ ಸ್ಥಾನವೇ ಬೇಕಾಗುವುದಿಲ್ಲ. ಶಾಸಕನಾಗಿದ್ದರೂ ಎಂದಿನಂತೆ ಅಭಿವೃದ್ಧಿ ಪರ ಕೆಲಸವನ್ನೆ ಮಾಡುತ್ತೇನೆ. ಮನೆಯ ಮಕ್ಕಳ ಮದುವೆ ಮಾಡಿಕೊಡುವುದು ಸಹಜ. ಆದರೆ ಬಡವರ ಸಾಮೂಹಿಕ ಮದುವೆ ಏರ್ಪಡಿಸುವುದು ಪುಣ್ಯದ ಕೆಲಸ. ಜೇವರ್ಗಿ ಶಾಸಕ ದೊಡ್ಡಪ್ಪಗೌಡ ಪಾಟೀಲ ನರಿಬೋಳ ಅವರು ತಮ್ಮ ಕ್ಷೇತ್ರದಲ್ಲಿ ಬಡವರ ಸಾಮೂಹಿಕ ವಿವಾಹ ಆಯೋಜಿಸುವ ಮೂಲಕ ಸಂತೃಪ್ತಿ ಸಂಪಾದಿಸುತ್ತಿದ್ದಾರೆ. ಪ್ರತಿ ಶಾಸಕರು ಈ ಮಾದರಿಯನ್ನು ಅನುಸರಿಸಬೇಕು~ ಎಂದು ಕಿವಿಮಾತು ಹೇಳಿದರು.
ಸಾಮೂಹಿಕ ಮದುವೆಗಳಲ್ಲಿ ವಧುವಿನ ಕೈಯಲ್ಲಿ ಸರ್ಕಾರವೆ ರೂ. 10 ಸಾವಿರ ಚೆಕ್ ನೀಡಿದರೆ, ಕುಟುಂಬಕ್ಕೆ ಅಗತ್ಯ ಪಾತ್ರೆ ಸಾಮಗ್ರಿಗಳನ್ನು ಖರೀದಿಸಲು ಅನುಕೂಲ ಮಾಡಿಕೊಟ್ಟಂತಾಗುತ್ತದೆ. ಈ ಬಗ್ಗೆ ಮುಖ್ಯಮಂತ್ರಿಗಳೊಂದಿಗೆ ಮಾತುಕತೆ ನಡೆಸಲಾಗುವುದು ಎಂದು ತಿಳಿಸಿದರು.
ಹೆಣ್ಣುಮಕ್ಕಳಿಗೆ ಶಿಕ್ಷಣ ಒದಗಿಸಲು ತಂದೆ-ತಾಯಿ ಹೆಚ್ಚಿನ ಆಸಕ್ತಿ ವಹಿಸಬೇಕು. ಸರ್ಕಾರ ಕೂಡಾ ಹೆಣ್ಣುಮಕ್ಕಳ ಶಿಕ್ಷಣವನ್ನು ಪ್ರೋತ್ಸಾಹಿಸಲು `ಭಾಗ್ಯಲಕ್ಷ್ಮಿ~ ಸೇರಿದಂತೆ ಹಲವು ಯೋಜನೆಗಳನ್ನು ಜಾರಿಗೊಳಿಸಿದೆ. ಗ್ರಾಮಸ್ಥರು ಮುಖ್ಯವಾಗಿ ಹೆಣ್ಣು ಮಕ್ಕಳಿಗೆ ಶಿಕ್ಷಣ ಕೊಡಿಸಲು ಸಂಕಲ್ಪ ಮಾಡಬೇಕು ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.