ADVERTISEMENT

ಗುರು ಸ್ಮರಣೆ ಪರಂಪರೆಯ ಪ್ರತೀಕ

​ಪ್ರಜಾವಾಣಿ ವಾರ್ತೆ
Published 10 ಏಪ್ರಿಲ್ 2011, 19:10 IST
Last Updated 10 ಏಪ್ರಿಲ್ 2011, 19:10 IST

ಗಂಗಾವತಿ:ವಿದ್ಯೆ ಕಲಿಸಿ ನಮ್ಮನ್ನು ಉನ್ನತ ಸ್ಥಾನಕ್ಕೆ ಏರಿಸಿದ ಗುರುಗಳಿಗೆ ನಮನ ಸಲ್ಲಿಸಲು ಏರ್ಪಡಿಸುವ ಗುರು ಸ್ಮರಣೆ ನಮ್ಮ ಪರಂಪರೆ ಮತ್ತು ಗುರು-ಶಿಷ್ಯರ ಸಂಬಂಧದ ಪ್ರತೀಕ ಎಂದು ಕೊಪ್ಪಳ ಗವಿಮಠದ ಅಭಿನವ ಗವಿಸಿದ್ದೇಶ್ವರ  ಸ್ವಾಮೀಜಿ ಅವರು  ಅಭಿಪ್ರಾಯಪಟ್ಟರು.ನಗರದ ಭಾರತೀಯ ವೈದ್ಯ ಭವನ (ಐಎಂಎ)ದಲ್ಲಿ ಭಾನುವಾರ ಇಲ್ಲಿನ ಸರ್ಕಾರಿ ಜ್ಯೂನಿಯರ್ ಕಾಲೇಜಿನ 1965-66ನೇ ಸಾಲಿನ ವಿದ್ಯಾರ್ಥಿಗಳು ಹಮ್ಮಿಕೊಂಡಿದ್ದ ಗುರುವಂದನಾ ಕಾರ್ಯಕ್ರಮದಲ್ಲಿ ಅವರು  ಮಾತನಾಡಿದರು.
 

“ನಮ್ಮ ಸಾಧನೆ, ಪ್ರಗತಿಯ ಬಗ್ಗೆ ಒಡಹುಟ್ಟಿದವರು ಸೇರಿದಂತೆ ನೆರೆಹೊರೆಯವರು ಮತ್ಸರ ಪಡುತ್ತಾರೆ. ಅದು ಲೋಕಾರೂಢಿ . ಆದರೆ ತಾಯಿ ಮತ್ತು ಗುರು ಮಾತ್ರ ನಮ್ಮ ಸಾಧನೆಯ ಬಗ್ಗೆ ಹೆಮ್ಮೆಪಡುವಪಡುತ್ತಾರೆ.’’ ಎಂದರು.

‘‘ಇಂದು ಕಂಪ್ಯೂಟರ್ ಗುರುವಿನ ಸ್ಥಾನದಲ್ಲಿದೆ. ನಮಗೆ ಎಲ್ಲವನ್ನೂ ಕಲಿಸಿ ಕೊಡುತ್ತದೆ, ಗುರುವಿನ ಸ್ಥಾನ ತುಂಬಬಲ್ಲ ವ್ಯಕ್ತಿಯೇ ಬೇಕಿಲ್ಲ ಎಂದೆನಿಸುತ್ತದೆ. ಆದರೆ ಆ ವಿದ್ಯೆ ಪರಿಪೂರ್ಣವಲ್ಲ. ಆದರ್ಶ ಇದ್ದರೆ ಮಾತ್ರ ಜೀವನದಲ್ಲಿ ಏನಾದರೂ ಸಾಧಿಸಲು ಸಾಧ್ಯ” ಎಂದು ಅಭಿಪ್ರಾಯಪಟ್ಟರು.
 

“ಆದರ್ಶವನ್ನು ಕೇವಲ ಗುರು ಮಾತ್ರ ತನ್ನ ಶಿಷ್ಯನಿಗೆ ಧಾರೆ ಎರೆಯಬಲ್ಲ. ಅಪ್ಪ ಸಂಪಾದಿಸುವ ಆಸ್ತಿ ದಯಾದಿಗಳ ಪಾಲಾಗಬಹುದು, ಸಂಪತ್ತು ಕಳ್ಳಕಾಕರ ಪಾಲಾಬಹುದು. ಆದರೆ ಗುರು ಕಲಿಸಿದ ವಿದ್ಯಾಸಂಪತ್ತು ಎಂದಿಗೂ ನಶಿಸಲಾರದು” ಎಂದರು.

ಈ ಸಂದರ್ಭದಲ್ಲಿ 1965-66ನೇ ಸಾಲಿನ ಗುರುಗಳಾದ ಎನ್.ಆರ್. ದೀಕ್ಷಿತ್, ಬಿ.ವಿ. ಸಜ್ಜನ್, ಪಿ.ಎನ್. ರೆಡ್ಡಿ, ಕರಿಬಸಪ್ಪ ಗುತ್ತಿ ಅವರನ್ನು ಸನ್ಮಾನಿಸಲಾಯಿತು. ಹೈಕೋರ್ಟ್ ನ್ಯಾಯಮೂರ್ತಿ ಅರಳಿ ನಾಗರಾಜ ಅಧ್ಯಕ್ಷತೆ ವಹಿಸಿದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.