ADVERTISEMENT

ಗುಲ್ಬರ್ಗ: ಮೇ 15ರೊಳಗೆ ರನ್‌ವೇ ಪೂರ್ಣ

​ಪ್ರಜಾವಾಣಿ ವಾರ್ತೆ
Published 7 ಜನವರಿ 2012, 19:30 IST
Last Updated 7 ಜನವರಿ 2012, 19:30 IST

ಗುಲ್ಬರ್ಗ: ತಾಲ್ಲೂಕಿನ ಶ್ರಿನಿವಾಸ ಸರಡಗಿ ಗ್ರಾಮದ ಬಳಿ `ರಾಹಿ ಏರ್‌ಪೋರ್ಟ್ ಅಭಿವೃದ್ಧಿ ಕಂಪೆನಿ~ ನಿರ್ಮಿಸುತ್ತಿರುವ ಗುಲ್ಬರ್ಗ ವಿಮಾನ ನಿಲ್ದಾಣದ ಮೊದಲ ಹಂತದ 1.91 ಕಿಲೋಮೀಟರ್ ಉದ್ದದ ರನ್‌ವೇ ಕಾಮಗಾರಿ ಭರದಿಂದ ಸಾಗಿದ್ದು, ಮೇ 15ರೊಳಗೆ ಪೂರ್ಣಗೊಳ್ಳಲಿದೆ ಎಂದು ಜಲಸಂಪನ್ಮೂಲ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ಬೊಮ್ಮಾಯಿ ಹೇಳಿದರು.

ವಿಮಾನ ನಿಲ್ದಾಣದಲ್ಲಿ ಏರ್‌ಪೋರ್ಟ್ ಟರ್ಮಿನಲ್ ಕಟ್ಟಡ ಕಾಮಗಾರಿಗೆ ಶುಕ್ರವಾರ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿ, ಮೇ ತಿಂಗಳ ಅಂತ್ಯದೊಳಗೆ ನಾಗರಿಕ ವಿಮಾನ ಇಲಾಖೆಯ ಪ್ರಧಾನ ನಿರ್ದೇಶಕರಿಂದ ಅನುಮತಿ ಪಡೆದ ಬಳಿಕ 80 ಆಸನಗಳ ವಿಮಾನಗಳ ಹಾರಾಟ ನಡೆಯಲಿದೆ ಎಂದರು.

ನಿಲ್ದಾಣಕ್ಕಾಗಿ ಒಟ್ಟು 696 ಎಕರೆ ಪ್ರದೇಶವನ್ನು ಸ್ವಾಧೀನಪಡಿಸಿ ಕೊಳ್ಳಲಾಗಿದೆ. ಈಗ ಮೊದಲ ಹಂತದಲ್ಲಿ 185 ಕೋಟಿ ರೂಪಾಯಿ ಮೊತ್ತದ ಕಾಮಗಾರಿಗಳನ್ನು ಸದರಿ ಕಂಪೆನಿಯು ಕೈಗೆತ್ತಿಕೊಂಡಿದೆ. ಈ ನಿಲ್ದಾಣಕ್ಕೆ ನೀರು ಮತ್ತು ವಿದ್ಯುತ್ ವ್ಯವಸ್ಥೆ ಕಲ್ಪಿಸುವ ಪ್ರಕ್ರಿಯೆ ಇಷ್ಟರಲ್ಲೇ ನಡೆಯಲಿದೆ. ಈ ನಿಲ್ದಾಣದಿಂದ ಈ ಭಾಗದಲ್ಲಿ ಆರ್ಥಿಕ ಚಟುವಟಿಕೆಗಳು ಹೆಚ್ಚಿನ ಪ್ರಮಾಣದಲ್ಲಿ ನಡೆಯಲು ಅನುಕೂಲವಾಗುತ್ತದೆ ಹಾಗೂ ಹೆಚ್ಚಿನ ಬಂಡವಾಳ ಹರಿದು ಬರುವ ಸಾಧ್ಯತೆಯಿದೆ ಎಂದು ಅವರು ಹೇಳಿದರು.

ಎಚ್‌ಕೆಡಿಬಿ ಅಧ್ಯಕ್ಷ ಅಮರನಾಥ ಪಾಟೀಲ್, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ವಿದ್ಯಾಸಾಗರ ಕುಲಕರ್ಣಿ, ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಶಿವಪ್ರಭು ಪಾಟೀಲ್, ವಿಧಾನ ಪರಿಷತ್ ಸದಸ್ಯ ಶಶೀಲ್ ಜಿ.ನಮೋಶಿ ಹಾಜರಿದ್ದರು. ಪ್ರಾಜೆಕ್ಟ್ ಎಂಜಿನಿಯರ್ ಎ.ಪಿ.ವಿಜಯ ಅವರು ವಿಮಾನ ನಿಲ್ದಾಣದ ವಿವಿಧ ಹಂತದ ಕಾಮಗಾರಿಗಳ ಮಾಹಿತಿಯನ್ನು ಸಚಿವರಿಗೆ ವಿವರಿಸಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.