ADVERTISEMENT

ಗುಲ್ಬರ್ಗ: ಶಿಕ್ಷಕರ ಕೊರತೆಗೆ ಆತಂಕ

​ಪ್ರಜಾವಾಣಿ ವಾರ್ತೆ
Published 25 ಜನವರಿ 2012, 19:30 IST
Last Updated 25 ಜನವರಿ 2012, 19:30 IST

ಗುಲ್ಬರ್ಗ: ಜಿಲ್ಲೆಯ ವಿವಿಧ ಶಾಲೆಗಳಿಂದ ವರ್ಗಾವಣೆಗೊಂಡ ಶಿಕ್ಷಕರನ್ನು ಪರ್ಯಾಯ ವ್ಯವಸ್ಥೆ ಆಗುವವರೆಗೆ ಬೇರೆ ಜಿಲ್ಲೆಗೆ ಬಿಡುಗಡೆ ಮಾಡಬಾರದು ಎಂದು ಬುಧವಾರ ಇಲ್ಲಿ ನಡೆದ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ನಿರ್ಣಯ ಕೈಗೊಳ್ಳ ಲಾಯಿತು.

ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ಬೊಮ್ಮಾಯಿ ಅಧ್ಯಕ್ಷತೆ ಯಲ್ಲಿ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಶಿಕ್ಷಕರ ಕೊರತೆ ಬಗ್ಗೆ ಶಾಸಕರು ತೀವ್ರ ಕಳವಳ ವ್ಯಕ್ತಪಡಿಸಿದಾಗ, ಈ ನಿರ್ಧಾರ ತೆಗೆದುಕೊಳ್ಳಲಾಯಿತು.

ಶಿಕ್ಷಕರ ಕೊರತೆ ವಿವರ ನೀಡಿದ ಡಿಡಿಪಿಐ ಬಿ.ಎಸ್. ಪರಮೇಶ, ಅತಿಥಿ ಶಿಕ್ಷಕರ ಹುದ್ದೆಗಳ ಪೈಕಿ ಭೌತಶಾಸ್ತ್ರ, ರಸಾಯನಶಾಸ್ತ್ರ ಹಾಗೂ ಗಣಿತ ವಿಷಯಗಳ ಶಿಕ್ಷಕರು ಸಿಗುತ್ತಿಲ್ಲ ಎಂದು ತಿಳಿಸಿದಾಗ, ಶಾಸಕರು ಅಸಮಾಧಾನ ವ್ಯಕ್ತಪಡಿಸಿದರು.
 
“ಒಂದೆಡೆ ಇರುವ ಶಿಕ್ಷಕರನ್ನು ಬೇರೆ ಕಡೆ ವರ್ಗಾವಣೆ ಮಾಡುತ್ತೀರಿ. ಆ ಖಾಲಿಯಾದ ಸ್ಥಾನಕ್ಕೆ ಇನ್ನೊಬ್ಬ ಶಿಕ್ಷಕರನ್ನು ನೇಮಕ ಮಾಡುವುದಿಲ್ಲ. ಹೀಗಾದರೆ ಗ್ರಾಮೀಣ ಭಾಗದ ಶಾಲೆಗಳಲ್ಲಿ ಕಲಿಯುವ ವಿದ್ಯಾರ್ಥಿಗಳ ಗತಿ ಏನು?” ಎಂದು ಸೇಡಂ ಶಾಸಕ ಡಾ. ಶರಣಪ್ರಕಾಶ ಪಾಟೀಲ ಆಕ್ರೋಶದಿಂದ ಪ್ರಶ್ನಿಸಿದರು.
ಜಿಲ್ಲಾಧಿಕಾರಿ ಡಾ. ಆರ್.ವಿಶಾಲ್, ಸಿಇಒ ಎಂ.ಜಿ.ವಿಜಯಕುಮಾರ್, ಸಂಸದ ಕೆ.ಬಿ.ಶಾಣಪ್ಪ ಮತ್ತಿತರರು ಇದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.