ADVERTISEMENT

ಗೊಮ್ಮಟನಿಗೆ ಮಹಾ ಮಜ್ಜನ

​ಪ್ರಜಾವಾಣಿ ವಾರ್ತೆ
Published 13 ಫೆಬ್ರುವರಿ 2011, 19:30 IST
Last Updated 13 ಫೆಬ್ರುವರಿ 2011, 19:30 IST

ಕೃಷ್ಣರಾಜಪೇಟೆ: ತಾಲ್ಲೂಕಿನ ಇತಿಹಾಸ ಪ್ರಸಿದ್ಧ ಬಸದಿ ಹೊಸಕೋಟೆಯ ಗೊಮ್ಮಟನಿಗೆ ಸಾವಿರಾರು  ಮಂದಿ ಭಕ್ತರ ಸಮ್ಮುಖದಲ್ಲಿ ಭಾನುವಾರ ಮಹಾ ಮಜ್ಜನ ನೆರವೇರಿತು.ಕೃಷ್ಣರಾಜಸಾಗರ ಜಲಾಶಯದ ಹಿನ್ನೀರಿನ ಸಮೀಪ ಇರುವ ಅಪರೂಪದ ಕೆತ್ತನೆಯುಳ್ಳ ಇಲ್ಲಿನ  ಬಾಹುಬಲಿ ಮೂರ್ತಿ ಎಳನೀರು, ಕಬ್ಬಿನಹಾಲು, ಹಾಲು, ಶ್ರೀಗಂಧ ಮತ್ತು ಕೇಸರಿಯ ಅಭಿಷೇಕದಲ್ಲಿ   ಕಂಗೊಳಿಸಿತು.ಮಲೆಯೂರು ಕನಕಗಿರಿ ಕ್ಷೇತ್ರದ ಭುವನಕೀರ್ತಿ ಭಟ್ಟಾರಕ ಸ್ವಾಮೀಜಿ, ನಾಗಮಂಗಲದ ಕಂಬದಹಳ್ಳಿಯ ಭಾನುಕೀರ್ತಿ ಭಟ್ಟಾರಕ ಸ್ವಾಮೀಜಿ, ಬೇಬಿ ಮಠದ ತ್ರಿನೇತ್ರ ಮಹಾಂತ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.

ಭುವನಕೀರ್ತಿ ಭಟ್ಟಾರಕ ಸ್ವಾಮೀಜಿ ಮಾತನಾಡಿ, ಇಲ್ಲಿನ ಕಾರ್ಯಕ್ರಮವನ್ನು ವೈಭವದಿಂದ ನಡೆಸಿದರೆ ಸಾಲದು. ಸಮಾರಂಭದಲ್ಲಿ ಹಾಜರಿರುವ ಶಾಸಕರಾದ ಕೆ.ಬಿ.ಚಂದ್ರಶೇಖರ್, ಸಾ.ರಾ.ಮಹೇಶ್ ಈ ಕ್ಷೇತ್ರದ ಅಭಿವೃದ್ಧಿಗೆ  ಆದ್ಯತೆ ನೀಡಬೇಕು ಎಂದರು.

ಶಾಸಕದ್ವಯರು ಪ್ರತಿಕ್ರಿಯಿಸಿ ಬಾಹುಬಲಿ ಕ್ಷೇತ್ರಕ್ಕೆ ಸೂಕ್ತ ರಸ್ತೆ ಸಂಪರ್ಕ, ಪ್ರಚಾರ, ಪ್ರವಾಸಿಗಳಿಗೆ  ಮೂಲಭೂತ ಸೌಲಭ್ಯಗಳನ್ನು ಒದಗಿಸಲು ಸರ್ಕಾರದ ಮೇಲೆ ಒತ್ತಡ ತರುವ ಭರವಸೆ ನೀಡಿದರು.ಭಕ್ತರಿಗೆ  ಸಾಲಿಗ್ರಾಮದ ಜೈನ ಮಿಲನ್ ಸಂಸ್ಥೆ ಯುವ ಘಟಕದಿಂದ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು.

ತಹಶೀಲ್ದಾರ್ ಡಾ.ಎಚ್.ಎಲ್.ನಾಗರಾಜು, ವೃತ್ತನಿರೀಕ್ಷಕ ರಾಮಮೂರ್ತಿ, ಪುರಸಭಾ ಸದಸ್ಯ ಕೆ.ಆರ್.ನೀಲಕಂಠ, ಸಾಲಿಗ್ರಾಮದ ಜೈನ ಮಿಲನ್‌ಸಂಸ್ಥೆ ಯುವ ಘಟಕದ ಗೌರವಾಧ್ಯಕ್ಷ ಅಮರ್‌ಜಿತ್ , ಜೈನ ಸಮಾಜದ ಮುಖಂಡರಾದ ಆದಿರಾಜಯ್ಯ, ಡಾ.ಲಲಿತಾಂಗ ಕುಮಾರ್, ಮತ್ತಿತರರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.