ಸಿಂಧನೂರು: ಅನಕ್ಷರತೆ, ಮೂಢನಂಬಿಕೆ ಮತ್ತು ಅರಿವಿನ ಕೊರತೆಯಿಂದ ಗ್ರಾಮೀಣ ಪ್ರದೇಶದ ಜನರು ಹಲವು ರೋಗಗಳಿಗೆ ತುತ್ತಾಗುತ್ತಿದ್ದಾರೆ. ರೋಗ ನಿಯಂತ್ರಣದ ಜೊತೆಗೆ ಮುನ್ನೆಚ್ಚರಿಕೆಯ ದೃಷ್ಟಿಯಿಂದ ಅಲ್ಲಿ ವೈದ್ಯಕೀಯ ಸೇವೆಯ ಅವಶ್ಯಕತೆ ಇದೆ ಎಂದು ಮಾಜಿ ಶಾಸಕ ಹಂಪನಗೌಡ ಬಾದರ್ಲಿ ಅಭಿಪ್ರಾಯಪಟ್ಟರು.
ಅವರು ಮಂಗಳವಾರ ನಗರದ ಜೈನ್ ಕಲ್ಯಾಣ ಮಂಟಪದಲ್ಲಿ ಸಾಕಲ್‌ಚಂದ ಸಕಲೇಚಾ ಚಾರಿಟೇಬಲ್ ಟ್ರಸ್ಟ್ ಹಾಗೂ ಬೆಂಗಳೂರಿನ ಸಂತೋಷ ಆಸ್ಪತ್ರೆಯ ಸಂಯುಕ್ತ ಆಶ್ರಯದಲ್ಲಿ ಬೃಹತ್ ಉಚಿತ ಆರೋಗ್ಯ ತಪಾಸಣಾ ಶಿಬಿರದಲ್ಲಿ ಮಾತನಾಡಿದರು.
ಸಂತೋಷ ಆಸ್ಪತ್ರೆಯ ವೈದ್ಯ ಡಾ.ಬಿಕಮ್‌ಚಂದ್ ಸಿಂಧನೂರಿನ ನಿವಾಸಿಗಳಾಗಿ ಬೆಂಗಳೂರಿನಲ್ಲಿ ಬೃಹತ್ ವೈದ್ಯಕೀಯ ಸಂಸ್ಥೆಯನ್ನು ಬೆಳೆಸಿದ್ದಾರೆ. ತಮ್ಮ ಸಂಸ್ಥೆಯಿಂದ ಸಿಂಧನೂರಿನಲ್ಲಿ ಉಚಿತ ತಪಾಸಣೆ ಮತ್ತು ರಿಯಾಯಿತಿ ದರದಲ್ಲಿ ಗಂಭೀರ ಸ್ವರೂಪದ ರೋಗಗಳಿಗೆ ಶಸ್ತ್ರಚಿಕಿತ್ಸೆ ನೀಡಲು ಮುಂದಾಗಿರುವುದು ಪ್ರಶಂಸನೀಯ ಎಂದು ಮುಖ್ಯ ಅತಿಥಿಯಾಗಿದ್ದ ಮಾಜಿ ಸಂಸದ ಕೆ.ವಿರೂಪಾಕ್ಷಪ್ಪ ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ಸಂತೋಷ ಆಸ್ಪತ್ರೆಯ ಡಾ.ಬಿಕಮ್‌ಚಂದ ಸಾಕಲಚಂದ್, ಸಕಲೇಚಾ ಟ್ರಸ್ಟ್ ವತಿಯಿಂದ ಈಗಾಗಲೇ ಕಲ್ಯಾಣ ಮಂಟಪವನ್ನು ನಿರ್ಮಿಸಲಾಗಿದೆ. ಸಂತೋಷ ಆಸ್ಪತ್ರೆ ವತಿಯಿಂದ ಬಡವರ ಮತ್ತು ಅಸಹಾಯಕರ ಸೇವೆಗೆ ಮುಂದಾಗುವುದಾಗಿ ಭರವಸೆ ನೀಡಿದರು.
ಜೈನ್ ಸಮಾಜದ ಮುಖಂಡರಾದ ಜಬರಚಂದ್ ಬಂಬ್, ಮಾಣಿಕಚಂದ್, ಫಕೀರಚಂದ, ಭಾರತೀಯ ವೈದ್ಯಕೀಯ ಸಂಘದ ತ್ಲ್ಲಾಲೂಕು ಅಧ್ಯಕ್ಷ ಡಾ.ಜೆ.ಎನ್.ಇರಕಲ್, ಬಿ.ಎಸ್.ಆರ್. ಕಾಂಗ್ರೆಸ್ ಪಕ್ಷದ ಮುಖಂಡ ಕೆ.ಕರಿಯಪ್ಪ, ನಗರ ಯೋಜನಾ ಪ್ರಾಧಿಕಾರ ಅಧ್ಯಕ್ಷ ಎನ್.ಶಿವನಗೌಡ ಗೊರೇಬಾಳ, ತಾಲ್ಲೂಕು ಆರೋಗ್ಯಾಧಿಕಾರಿ ಫಾರೂಖ್‌ಸಾಬ ಜಾಗೀರದಾರ, ಅಮರೇಗೌಡ ವಿರುಪಾಪುರ ಮತ್ತಿತರರು ಉಪಸ್ಥಿತರಿದ್ದರು.
ಒತ್ತಾಯ(ಕುಷ್ಟಗಿ): ಗ್ರಾಮದಲ್ಲಿ ಅಶಾಂತಿಗೆ ಕಾರಣವಾಗಿರುವ ಅಕ್ರಮ ಮದ್ಯ ಮಾರಾಟಕ್ಕೆ ಕಡಿವಾಣ ಹಾಕುವಂತೆ ತಾಲ್ಲೂಕಿನ ಕಡಿವಾಲ ಗ್ರಾಮಸ್ಥರು ಮಂಗಳವಾರ ಇಲ್ಲಿ ಅಧಿಕಾರಿಗಳನ್ನು ಒತ್ತಾಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.