ADVERTISEMENT

ಗ್ರಾಮ ಪಂಚಾಯಿತಿ ನೌಕರರ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 4 ಅಕ್ಟೋಬರ್ 2012, 19:30 IST
Last Updated 4 ಅಕ್ಟೋಬರ್ 2012, 19:30 IST

ಬಾಗೇಪಲ್ಲಿ: ಸರ್ಕಾರ ನಿಗದಿಪಡಿಸಿದ ವೇತನ, ಭವಿಷ್ಯನಿಧಿ ಹಣ, ಜನಶ್ರೀ ವಿಮಾ ಯೋಜನೆ ಜಾರಿ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ಗ್ರಾಮ ಪಂಚಾಯಿತಿ ನೌಕರರ ಸಂಘದ ನೇತೃತ್ವದಲ್ಲಿ ಗ್ರಾ.ಪಂ. ನೌಕರರು ಗುರುವಾರ ತಾಲ್ಲೂಕು ಪಂಚಾಯಿತಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.

ಪಟ್ಟಣದ ಎಚ್.ಎನ್.ವೃತ್ತದಿಂದ ಹೊರಟ ಸಂಘದ ಸದಸ್ಯರು ಗ್ರಾಮ ಪಂಚಾಯಿತಿ ನೌಕರರ ಬೇಡಿಕೆ ಈಡೇರಿಸದ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿದರು.

ಸಂಘದ ಗೌರವಾಧ್ಯಕ್ಷ ವೈ.ಆರ್.ವೆಂಕಟೇಶ್‌ಬಾಬು ಮಾತನಾಡಿ, ಬಿಲ್ ಕಲೆಕ್ಟರ್, ಗುಮಾಸ್ತ, ವೈರ್‌ಮೆನ್, ಕಂಪ್ಯೂಟರ್ ಅಪರೇಟರ್‌ಗಳಿಗೆ ಸರ್ಕಾರ ನಿಗದಿಪಡಿಸಿದ ಕುಶಲ ವಿಭಾಗದಲ್ಲಿ ಪರಿಗಣಿಸಬೇಕು. ಸಿಬ್ಬಂದಿ ವೇತನಕ್ಕೆ ಪ್ರತ್ಯೇಕ ಖಾತೆ ತೆರೆದು, ಸರ್ಕಾರ ಹಾಗೂ ಜಿಲ್ಲಾ ಪಂಚಾಯಿತಿಯಿಂದ ನೇರವಾಗಿ ಖಾತೆಗೆ ವೇತನ ಜಮಾ ಆಗಬೇಕು. ಪಂಚಾಯಿತಿ ಕಾಯ್ದೆ ನಿಯಮ 112ರ ಅಡಿಯಲ್ಲಿ ನೌಕರರನ್ನು ತಕ್ಷಣ ಅನುಮೋದನೆ ಗೊಳಿಸಬೇಕು. ಗ್ರಾಮ ಪಂಚಾಯಿತಿಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ಕೂಡಲೇ ಭರ್ತಿ ಮಾಡಬೇಕು. ಬಾಕಿ ಇರುವ ವೇತನ ನೀಡಬೇಕು ಎಂದು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಸಂಘದ ಅಧ್ಯಕ್ಷ ವೆಂಕಟರಾಮಯ್ಯ, ಕಾರ್ಯದರ್ಶಿ ಸುಧಾಕರ, ಜಂಟಿಕಾರ್ಯದರ್ಶಿ ಎಂ.ಎಸ್.ಬಾಬುರೆಡ್ಡಿ, ಸಿಐಟಿಯು ಮುಖಂಡರಾದ ಜಿ.ಮುಸ್ತಾಫ, ಯಾಮನ್ನ, ಮೂರ್ತಿ, ಈಶ್ವರಪ್ಪ, ಡಿ.ಎನ್.ಕೃಷ್ಣಮೂರ್ತಿ, ವೆಂಕಟರಮಣ ಮತ್ತಿತರರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.