ADVERTISEMENT

ಚಾರಿತ್ರಿಕ ಪ್ರಜ್ಞೆಗೆ ರನ್ನ ಹಿಡಿದ ಕನ್ನಡಿ

​ಪ್ರಜಾವಾಣಿ ವಾರ್ತೆ
Published 7 ಅಕ್ಟೋಬರ್ 2012, 19:30 IST
Last Updated 7 ಅಕ್ಟೋಬರ್ 2012, 19:30 IST

ರಾಯಚೂರು: ಚರಿತ್ರೆ ಮತ್ತು ಕಾವ್ಯ ಮೇಳೈಸಿ ಶ್ರೇಷ್ಠ ಸಾಹಿತ್ಯ ಕೊಟ್ಟ ಹಿರಿಮೆ ಕವಿಚಕ್ರವರ್ತಿ ರನ್ನನದ್ದು. ಆಗಿನ ಕಾಲದ ಸಮಕಾಲೀನ ಜಗತ್ತಿನ ಬಗ್ಗೆ ಅತಿಯಾಗಿ ಸ್ಪಂದಿಸಿದ ಸೂಕ್ಷ್ಮ ಸಂವೇದಾನಶೀಲ ವ್ಯಕ್ತಿ ರನ್ನ. ಶಾಸನ ಕವಿಯಾಗಿಯೂ ಪ್ರಸಿದ್ಧಿಗೊಂಡು ಚಾರಿತ್ರಿಕ ಪ್ರಜ್ಞೆಗೆ ಕನ್ನಡಿ ಹಿಡಿದ ಕವಿ ರನ್ನ ಎಂದು ಸಾಹಿತಿ ಡಾ.ವೃಷಭೇಂದ್ರಚಾರ್ಯ ಅರ್ಕಸಾಲಿ ಹೇಳಿದರು.

ಭಾನುವಾರ ಇಲ್ಲಿನ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಹಾಗೂ ಮುಧೋಳದ ಕವಿಚಕ್ರವರ್ತಿ ರನ್ನ ಪ್ರತಿಷ್ಠಾನ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ್ಧ ಕವಿರತ್ನ ರನ್ನ: ಕಾವ್ಯಾನುಸಂಧಾನ ತಿಂಗಳ ಉಪನ್ಯಾಸ ಮಾಲಿಕೆಯಡಿ ರನ್ನನ `ಅಜಿತ ಪುರಾಣ ತಿಲಕ~ ಕಥೆ, ಚರಿತ್ರೆ ಮತ್ತು ಧರ್ಮ ಎಂಬ ವಿಷಯ ಕುರಿತು ವಿಷಯ ಮಂಡನೆ ಮಾಡಿ ಮಾತನಾಡಿದರು.

ರಾಷ್ಟ್ರಕೂಟರ ಕೊನೆಯ ಕಾಲ ಮತ್ತು ಕಲ್ಯಾಣ ಚಾಲುಕ್ಯರ ಆರಂಭ ಕಾಲದಲ್ಲಿ ಬಾಳಿದವರು ಕವಿಚಕ್ರವರ್ತಿ ರನ್ನ. ಧರ್ಮ ಮತ್ತು ರಾಜನಿಷ್ಠೆ ರನ್ನ ಬರೆದ ವಿಷಯ ವಸ್ತುಗಳು. ರನ್ನ ರಚಿಸಿದ ಕೃತಿಗಳು, ಕಾವ್ಯಗಳು ಆಗಿನ ಕಾಲದಲ್ಲಿ ಕಲ್ಪನೆ, ಗೌರವದಿಂದ ಬರೆದಿರಬಹುದು ಎಂದು ಭಾವಿಸಿದರೆ ಅದು ತಪ್ಪಾಗುತ್ತದೆ. ಅತ್ತಿಮಬ್ಬೆಯ ಬಗ್ಗೆ ರನ್ನ ಬರೆಯುತ್ತ ಆ ಕಾಲದ ಜೀವನ ಮೌಲ್ಯ, ಸಂಸ್ಕೃತಿ, ಹಿರಿಮೆಯನ್ನು ನೆನೆಯುತ್ತಾನೆ. 10ನೇ ಶತಮಾನದ ಸಂಸ್ಕೃತಿಯ ಹಿರಿಮೆ-ಗರಿಮೆ ಕಟ್ಟಿಕೊಡುತ್ತಾನೆ ಎಂದು ವಿವರಿಸಿದರು.

ಕನ್ನಡ ಸಾಹಿತ್ಯ ಪರಿಷತ್‌ನ ಜಿಲ್ಲಾ ಘಟಕದ ಅಧ್ಯಕ್ಷ ಮಹಾಂತೇಶ ಮಸ್ಕಿ, ಸಾಹಿತಿ ಬಸವಲಿಂಗ ಸೊಪ್ಪಿಮಠ, ಪ್ರತಿಷ್ಠಾನದ ಸಂಚಾಲಕ ಡಾ.ಬಾಳಾಸಾಹೇಬ ಲೋಕಾಪುರ, ಕನ್ನಡ ಸಾಹಿತ್ಯ ಪರಿಷತ್ ತಾಲ್ಲೂಕು ಘಟಕದ ಅಧ್ಯಕ್ಷ ಚಿದಾನಂದ ಸಾಲಿ ಮತ್ತಿತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.