ಚಿಂಚಲಿ (ರಾಯಬಾಗ): ಪ್ರತಿ ಮೂರು ವರ್ಷಕ್ಮೊಮ್ಮೆ ನಡೆಯುವ ಉತ್ತರ ಕರ್ನಾಟಕ ಹಾಗೂ ದಕ್ಷಿಣ ಮಹಾರಾಷ್ಟ್ರದ ಇಲ್ಲಿನ ಶಕ್ತಿ ದೇವತೆಯಾದ ಮಾಯಕ್ಕ ದೇವಿಯ ಕಾರಹುಣ್ಣಿಮೆಯ ಕಿಲಕಟ್ಟಿ ಜಾತ್ರಾ ಮಹೋತ್ಸವಕ್ಕೆ ಮಾಯಕ್ಕ ದೇವಿ ದೇವಸ್ಥಾನದಿಂದ ಬುಧವಾರ ಸಂಜೆ ಸಕಲ ವಾದ್ಯ ಮೇಳಗಳೊಂದಿಗೆ ಧೂಪಾರ್ತಿ ಹಾಗೂ ಪ್ರಮುಖರು ಮೆರವಣಿಗೆಯಲ್ಲಿ ಗಮಿಸಿ ಕಿಲಕಟ್ಟಿ ಬಾಯಿತೆಗೆಯಲು ಚಾಲನೆ ನೀಡಲಾಯಿತು.
ಕಿಲಕಟ್ಟಿ ಜಾತ್ರೆ ಬರುವ ಭಾನುವಾರದವರೆಗೆ ವಿಜೃಂಭಣೆಯಿಂದ ಜರುಗಲಿದೆ. ಜಾತ್ರಾ ಪ್ರಯುಕ್ತ 19ರಂದು ಬುಧವಾರ ಸಂಜೆ 6ಕ್ಕೆ ದೇವಿಯ ಧೂಪಾರ್ತಿ ಹಾಗೂ ಸಕಲ ವಾದ್ಯ ಮೇಳಗಳೊಂದಿಗೆ ಕಿಲಕಟ್ಟಿಯ ಬಾಯಿ ತೆಗೆಯಲಾಯಿತು. 20ರಂದು ಗುರುವಾರ ಗ್ರಾಮದಲ್ಲಿ ಮುತ್ತೈದೆಯರಿಂದ ಪೂಜೆ ಹಾಗೂ ಹೋಳಿಗೆಯ ಮಹಾನೈವೇದ್ಯ. 21ರಂದು ಶುಕ್ರವಾರ ಸಂಜೆ 6ಕ್ಕೆ ಕಿಲಕಟ್ಟರಿಗೆ ಆಹಾರ ನೀಡಿ ಕಿಲಕಟ್ಟಿಯ ಬಾಯಿ ಮುಚ್ಚುವುದು. ನಂತರ ಸಂಜೆ ಹಾಗೂ ರಾತ್ರಿ ಹೊನ್ನುಗ್ಗಿ ನಿಮಿತ್ತ ಜಾಗರಣೆ ಹಾಗೂ ದೇವಿಯ ಪಾಲಕಿ ಉತ್ಸವ ಜರುಗುವುದು. 23 ಭಾನುವಾರದಂದು ಸಂಜೆ ಕಾರಹುಣ್ಣಿಮೆ ಅಂಗವಾಗಿ ಕರಿ ಹರಿಯುವ ಕಾರ್ಯಕ್ರಮಗಳು ಜರುಗಲಿವೆ.
ಐತಿಹಾಸಿಕ ಹಿನ್ನೆಲೆ: 1812ರ ಸಂದರ್ಭದಲ್ಲಿ ಮಾಯಕ್ಕ ದೇವಿ ಕೊಂಕಣದಿಂದ ಚಿಂಚಲಿಗೆ ಆಗಮಿಸಿದಾಗ ಇಲ್ಲಿ ಕಿಲ ಮತ್ತು ಕಿಟ್ಟರೆಂಬ ದುಷ್ಟ ರಾಕ್ಷಸರ ಕಾಟ ಬಹಳವಿತ್ತು. ಅವರು ತಮಗೆ ಗಂಡು ಹಾಗೂ ಹೆಣ್ಣು, ಯಾವ ಪ್ರಾಣಿ ಪಕ್ಷಿಗಳಿಂದ ಯಾರಿಂದಲೂ ಮರಣವಾಗಬಾರದೆಂದು ಬ್ರಹ್ಮನಿಂದ ವರ ಪಡೆದಿದ್ದರಂತೆ.
ಭಕ್ತರ ಕಷ್ಟ ಪರಿಹರಿಸಲು ಕಿಲ-ಕಟ್ಟರನ್ನು ಸಂಹರಿಸಲು ದೇವಿಯು ವೀರರನ್ನು ಸಹಾಯಕ್ಕೆ ತೆಗದುಕೊಂಡು ಕೊನೆಗೆ ಅರ್ಧನಾರೀಶ್ವರ ಅವತಾರ ತಾಳಿದಾಗ ರಾಕ್ಷಸರು ದೇವಿಗೆ ಶರಣಾಗತರಾಗಿ ತಾವು ಬೇಡಿದ್ದನ್ನು ಕೊಟ್ಟರೆ ಜೀವ ಬಿಡುವುದಾಗಿ ಹೇಳಿದರಂತೆ. ಅದಕ್ಕೆ ದೇವಿ ಕೊಟ್ಟ ವಚನದಂತೆ ಬೆಂಕಿ ಇಲ್ಲದ ಅಡುಗೆ ಮಾಡಿ ಇಡಿ ಜನತೆಗೆ ಊಟಹಾಕಬೇಕು. ಈ ರೀತಿ ಪ್ರತಿ ಮೂರು ವರ್ಷಕೊಮ್ಮೆ ಮಾಡಬೇಕು ಅಂದರೆ ನಮ್ಮ ಆಶೆ ತೀರುವುದು ಎಂಬ ಮಾತಿಗೆ ದೇವಿಯು ವಚನ ಕೊಟ್ಟುಸಂಹಾರ ಮಾಡಿದಳು ಎಂದು ಐತಿಹ್ಯವಿದೆ. ಈ ಹಿನ್ನೆಲೆಯಲ್ಲಿ ಪ್ರತಿ ಮೂರು ವರ್ಷಕ್ಕೊಮ್ಮೆ ಕಿಲಕಟ್ಟೆ ಜಾತ್ರೆ ನೆರವೇರುತ್ತದೆ.
ಮಾಯಕ್ಕ ದೇವಿ ದೇಸ್ಥಾನದ ಟ್ರಸ್ಟ್ ಕಮಿಟಿ ಅಧ್ಯಕ್ಷ ಜಿತೇಂದ್ರ ಜಾಧವ ಅವರ ನೇತೃತ್ವದಲ್ಲಿ ಬುಧವಾರ ಸಂಜೆ ವಿವಿಧ ಧಾರ್ಮಿಕ ಕಾರ್ಯಕ್ರಮ ಗಳು ಜರುಗಿದವು.
ಪ್ರಕಾಶ ಶಿಂಧೆ, ಮಹೇಶ ಕೊಂಬೆನ್ನವರ, ಸೇರಿ ದಂತೆ ಸರ್ವ ಸದಸ್ಯರು ಹಾಗೂ ಗ್ರಾಮದ ಪ್ರಮುಖರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಜಾತ್ರಾ ಮಹೋತ್ಸವದ ಅಂಗವಾಗಿ ಭಾನುವಾರದವರೆಗೆ ಕಿಲಕಟ್ಟಿ ಆವರಣದಲ್ಲಿ ಸಾರ್ವಜನಿಕ ಅನ್ನ ಸಂತರ್ಪಣೆ ಕಾರ್ಯಕ್ರಮ ಏರ್ಪಡಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.